ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣದ ಸಂಬಂಧ ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿಗಳಾದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಮಾನತು ಆದೇಶ ವಾಪಸ್ ಪಡೆಯಲಾಗಿದ್ದು, ಇಬ್ಬರು ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಬೆಂಗಳೂರು ಲಿ. ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಶ್ರೀನಿವಾಸ್, ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್’ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಎಸ್.ರಂಗಪ್ಪ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣದಲ್ಲಿ ಕೇವಲ ಕೆಳಹಂತದ ಅಧಿಕಾರಿಗಳು ಭಾಗಿಯಾಗಿದ್ದರು ಎನ್ನಲಾಗಿತ್ತು. ಬಳಿಕ ಇಬ್ಬರು ಐಎಎಸ್ ಅಧಿಕಾರಿಗಳಾದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಭಾಗಿಯಾಗಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಕೇಂದ್ರ ಚುನಾವಣೆ ಆಯೋಗ ಅಮಾನತು ಮಾಡಿತ್ತು.
ಮತದಾರ ಪಟ್ಟಿಯಿಂದ ಮತದಾರರನ್ನು ತೆಗೆದು ಹಾಕಿರುವುದು, ಸೇರ್ಪಡೆ, ತಿದ್ದುಪಡಿ ಬಗ್ಗೆ ಪೂರ್ಣಪರಿಶೀಲನೆಗಾಗಿ ಏಳು ಜನ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಕೇಂದ್ರ ಚುನಾವಣಾ ಆಯೋಗದಿಂದ ಆದೇಶ ಹೊರಡಿಸಲಾಗಿದೆ. ಅದರಲ್ಲೂ ಚಿಕ್ಕಪೇಟೆ, ಶಿವಾಜಿನಗರ, ಮಹಾದೇವಪುರ ವಲಯದಲ್ಲಿ ವಿಶೇಷವಾಗಿ ಪರಿಶೀಲನೆ ಮಾಡಲು ಸೂಚನೆ ನೀಡಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತನಿಖೆಗೆ ಐಎಎಸ್ ಅಧಿಕಾರಿ ವಿಶಾಲ್ ಅವರನ್ನು ನೇಮಕ ಮಾಡಲಾಗಿದೆ. ಮಹಾದೇವಪುರ ವಲಯಕ್ಕೆ ಅಜೇಯ್ ನಾಗಭೂಷಣ್ ಹಾಗೂ ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಅವರನ್ನು ನೇಮಿಸಿದೆ.
ಖಾಸಗಿ ಸಂಸ್ಥೆಯಿಂದ ಮತದಾರರ ಮಾಹಿತಿ ಸಂಗ್ರಹಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಿಂದ ಮತದಾರರ ಹೆಸರು ಡಿಲೀಟ್ ಆದವರ ಬಗ್ಗೆ ಕೂಲಂಕಷವಾಗಿ ಪರಿಶೀಲನೆಗೆ ಆದೇಶಿಸಿದ್ದು, ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ, ಹಾಗೂ ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಕೂಡಾ ಅಮಾನತು ಮಾಡಲಾಗಿತ್ತು. ಅಲ್ಲದೇ ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಗೆ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿತ್ತು.
ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದ ಸಂಬಂಧ ಚಿಲುವೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿರುದ್ಧ ಹಲಸೂರುಗೇಟ್ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಮತದಾರರ ಪಟ್ಟಿವಿಶೇಷ ಪರಿಷ್ಕರಣೆ 2023 ಕಾರ್ಯಚಟುವಟಿಕೆಗಳ ಕುರಿತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಷರತ್ತುಬದ್ಧ ಅನುಮತಿಯನ್ನು ಬಿಬಿಎಂಪಿ ನೀಡಿತ್ತು.
ಈ ಸಂಸ್ಥೆಯ ವಿರುದ್ಧ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ದೂರು ಬಂದಿದ್ದು ಷರತ್ತು ಉಲ್ಲಂಘಿಸಿರುವುದನ್ನು ಪರಿಗಣಿಸಿ ಅನುಮತಿ ಪತ್ರವನ್ನು ರದ್ದುಪಡಿಸಲಾಗಿದೆ. ಜೊತೆಗೆ ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.