ನಿವೃತ್ತ ನ್ಯಾಯಮೂರ್ತಿ ಮಲ್ಹೋತ್ರಾ ಹೇಳಿಕೆ ತಪ್ಪುದಾರಿಗೆಳೆಯುವಂತದ್ದು: ಕೇರಳ ಸಚಿವರ ಸ್ಪಷ್ಟನೆ

Prasthutha|

ಕೊಚ್ಚಿ: ಕಮ್ಯುನಿಸ್ಟ್ ಸರ್ಕಾರಗಳು ಹಿಂದೂ ದೇವಾಲಯಗಳನ್ನು ವಶಪಡಿಸಿಕೊಂಡಿವೆ ಮತ್ತು ಆದಾಯಕ್ಕಾಗಿ ಅದನ್ನು ಮಾಡುತ್ತಿವೆ ಎಂಬ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರ ಪ್ರತಿಪಾದನೆಯು ಆಧಾರರಹಿತವಾಗಿದೆ ಮತ್ತು ಸಂಪೂರ್ಣ ತಪ್ಪು ತಿಳುವಳಿಕೆಯನ್ನು ಆಧರಿಸಿದೆ ಎಂದು ಕೇರಳ ಎಲ್ ಡಿಎಫ್ ಸರಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ, ದೇವಸ್ಥಾನಗಳು, ಸಂಸದೀಯ ವ್ಯವಹಾರಗಳ ಸಚಿವ ಕೆ.ರಾಧಾಕೃಷ್ಣನ್ ಸ್ಪಷ್ಟಪಡಿಸಿದ್ದಾರೆ.

- Advertisement -

ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಹೇಗೆ ಕಾರ್ಯನಿರ್ವಹಿಸಿದರು ಎಂಬುದು ಈ ಹೇಳಿಕೆಗಳಿಂದ ಸ್ಪಷ್ಟವಾಗಿದೆ ಎಂದೂ ಕೇರಳದ ಸಚಿವರು ಟಿಪ್ಪಣಿ ಮಾಡಿದ್ದಾರೆ.

ಕಮ್ಯೂನಿಸ್ಟ್ ಪಕ್ಷವಾಗಲಿ ಅಥವಾ ಎಲ್ ಡಿ ಎಫ್ ಸರಕಾರವಾಗಲಿ ಯಾವುದೇ ಹಿಂದೂ ದೇವಾಲಯವನ್ನು ವಶಪಡಿಸಿಕೊಂಡಿಲ್ಲ. ಹಿಂದೂ ಧರ್ಮದ ಎಲ್ಲಾ ಪಂಗಡಗಳಿಗೆ ಪೂಜೆ ಮಾಡುವ ಹಕ್ಕನ್ನು ಗಳಿಸಲು ಕಮ್ಯುನಿಸ್ಟ್ ಪಕ್ಷಗಳು ನಡೆಸಿದ ಹೋರಾಟಗಳು ಇತಿಹಾಸದ ಭಾಗವಾಗಿದೆ. ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ) ನೇತೃತ್ವದ ಎಡಪಂಥೀಯ ಸರ್ಕಾರಗಳು ಎಲ್ಲಾ ಪಂಗಡಗಳ ಆರಾಧನೆ ಮತ್ತು ನಂಬಿಕೆಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಂಡಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

- Advertisement -

ಎಡ ಸರಕಾರಗಳ ಕಾಲದಲ್ಲೇ ಪರಭಾರೆಯಾಗಿದ್ದ ದೇವಸ್ಥಾನಗಳ ಭೂಮಿಯನ್ನು ಮತ್ತೆ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕ್ರಮಕೈಗೊಂಡಿರುವುದು, ದೇವಸ್ಥಾನದ ನೌಕರರಿಗೆ ವ್ಯವಸ್ಥಿತವಾಗಿ ವೇತನ ನೀಡಲು ಆರಂಭಿಸಿದ್ದು ಮತ್ತು ದೇವಸ್ಥಾನದ ಆವರಣಕ್ಕೂ ಪ್ರವೇಶ ನಿರಾಕರಿಸಲಾಗಿದ್ದ ಜನರನ್ನು ದೇವಸ್ಥಾನದ ನೌಕರರನ್ನಾಗಿ ಪರಿವರ್ತಿಸಲು ಕ್ರಮ ಕೈಗೊಂಡಿರುವುದು. ದೇವಸ್ಥಾನದ ಆದಾಯವನ್ನು ಸರಕಾರವೇ ಕಬಳಿಸಬೇಕೆಂಬ ತೀವ್ರಗಾಮಿ ಹಿಂದುತ್ವ ಶಕ್ತಿಗಳ ದೀರ್ಘ ಕಾಲದ ಪ್ರಚಾರ ಈ ನಿವೃತ್ತ ನ್ಯಾಯಾಧೀಶರ ಮೇಲೂ ಪ್ರಭಾವ ಬೀರಿರಬಹುದು. ಯಾವುದೇ ದೇವಸ್ಥಾನದ ಆದಾಯವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ, ದೇವಸ್ಥಾನ ಮಂಡಳಿಗಳ ನಿರ್ವಹಣೆಗೆ ಸರಕಾರವೇ ಅಗತ್ಯವಾದ ಹಣಕಾಸಿನ ನೆರವು ನೀಡುತ್ತದೆ ಎಂಬುದು ವಾಸ್ತವ ಸಂಗತಿ ಎಂದು ರಾಧಾಕೃಷ್ನನ್ ಹೇಳಿದ್ದಾರೆ.

ರಾಜ್ಯ ಸರ್ಕಾರವು 2018 ರಿಂದ 2022 ರವರೆಗಿನ ಐದು ವರ್ಷಗಳಲ್ಲಿ ವಿವಿಧ ದೇವಸ್ಥಾನ ಮಂಡಳಿಗಳಿಗೆ 449 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ, ಇದನ್ನು ಪ್ರವಾಹ ಮತ್ತು ಕೋವಿಡ್ ದೇವಸ್ಥಾನ ಮಂಡಳಿಗಳ ಆದಾಯದಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಸಿದಾಗ ಸಿಬ್ಬಂದಿ ವೇತನವನ್ನು ಪಾವತಿಸಲು ಮತ್ತು ದಿನನಿತ್ಯದ ಕಾರ್ಯಾಚರಣೆಗಳನ್ನು ನಡೆಸಲು ಬಜೆಟ್ ಹಂಚಿಕೆಯೊಂದಿಗೆ ಮತ್ತು ಅದರ ಹೊರಗೆಯೂ ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ ಡಿ ಎಫ್ ಸರ್ಕಾರವು ಪ್ರಸ್ತುತ ಶಬರಿಮಲೆ ಮಾಸ್ಟರ್ ಪ್ಲಾನ್ ನಂತಹ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ದಕ್ಷತೆಯಿಂದ ಕಾರ್ಯಗತಗೊಳಿಸಲು ಮತ್ತು ಸುಗಮ ಯಾತ್ರಾ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡುತ್ತಿದೆ. ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಜನರನ್ನು ಸಂಪೂರ್ಣವಾಗಿ ದಾರಿ ತಪ್ಪಿಸಬಹುದೇ ಮತ್ತು ಎಲ್ ಡಿಎಫ್ ಸರ್ಕಾರದ ವಿರುದ್ಧ ತಿರುಗಿಸಬಹುದೇ ಎಂದು ನೋಡುವ ಪ್ರಯತ್ನ ಮಾಡಿದ್ದಾರೆ. ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಹೇಗೆ ಕಾರ್ಯನಿರ್ವಹಿಸಿದರು ಎಂಬುದು ಈ ಹೇಳಿಕೆಗಳಿಂದ ಸ್ಪಷ್ಟವಾಗಿದೆ ಎಂದೂ ಅವರ ಹೇಳಿಕೆಗಳು ಸ್ಪಷ್ಟಪಡಿಸುತ್ತವೆ ಎಂದೂ ಕೇರಳದ ಸಚಿವರು ಟಿಪ್ಪಣಿ ಮಾಡಿದ್ದಾರೆ.

ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರಿಗೆ ಕೇರಳದ ಸಾರ್ವಜನಿಕ ಹಣಕಾಸಿನ ಬಗ್ಗೆ ಅಜ್ಞಾನವಿದೆ, ಅದಕ್ಕಿಂತಲೂ ಹೆಚ್ಚಾಗಿ ಕಮ್ಯುನಿಸ್ಟರ ಬಗ್ಗೆ ಆಳವಾದ ಪೂರ್ವಗ್ರಹವನ್ನು ಹೊಂದಿದ್ದಾರೆ ಎಂದು ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಕೇರಳದ ಹಿಂದಿನ ಎಲ್ ಡಿ ಎಫ್ ಸರಕಾರದ ಹಣಕಾಸು ಮಂತ್ರಿ ಡಾ. ಥಾಮಸ್ ಐಸಾಕ್ ಹೇಳಿದ್ದಾರೆ. ದೇವಸ್ಥಾನಗಳ ಆದಾಯದ ಒಂದೇ ಒಂದು ಪೈಸೆಯೂ ಬಜೆಟ್ ಆದಾಯದೊಳಕ್ಕೆ ಬರುವುದಿಲ್ಲ, ಬದಲಿಗೆ ನೂರಾರು ಕೋಟಿ ರೂ.ಗಳನ್ನು ಭಕ್ತಜನಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ದೇವಸ್ಥಾನಗಳ ಆಡಳಿತವನ್ನು ಬೆಂಬಲಿಸಲು ಖರ್ಚು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೇರಳದ ಶಬರಿಮಲೆ ದೇವಸ್ಥಾನಕ್ಕೆ 10-50 ವಯೋಗುಂಪಿನ ಹುಡುಗಿಯರು ಮತ್ತು ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬ ದೇವಾಲಯದ ನಿಯಮವು ಮಹಿಳಾ ಸಮಾನತೆ ಮತ್ತು ಪೂಜೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸೆಪ್ಟಂಬರ್ 2018ರಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ನ ಸಂವಿಧಾನ ಪೀಠವು 4-1 ತೀರ್ಪಿನಲ್ಲಿ ರದ್ದುಗೊಳಿಸಿತು, ಇದಕ್ಕೆ ಏಕೈಕ ಭಿನ್ನಮತದ ಟಿಪ್ಪಣಿ ಬಂದದ್ದು ಈ ನ್ಯಾಯಪೀಠದಲ್ಲಿದ್ದ ಏಕೈಕ ಮಹಿಳಾ ಸದಸ್ಯರಾದ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾರವರಿಂದ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.




Join Whatsapp