ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಹಾಜಿ ಇಸ್ಮಾಯೀಲ್ ನಿಧನ

Prasthutha|

ಪುತ್ತೂರು, ಆ.1: ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಹಾಗೂ ಸಾಮಾಜಿಕ ಕಾರ್ಯಕರ್ತ ಹಾಜಿ ಇಸ್ಮಾಯೀಲ್ ಅವರು ಭಾನುವಾರ ರಾತ್ರಿ ವಯೋಸಹಜ ಖಾಯಿಲೆಯಿಂದ ಪುತ್ತೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ.

- Advertisement -


ಅವರಿಗೆ 85 ವರ್ಷ ವಯಸ್ಸಾಗಿತ್ತು. ಪುತ್ತೂರಿನಲ್ಲಿ ಡೆಪ್ಯುಟಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಇಸ್ಮಾಯೀಲ್ ಅವರು ಸುಮಾರು 25 ವರ್ಷಗಳ ಹಿಂದೆ ನಿವೃತ್ತರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮಸೀದಿ, ಮದ್ರಸ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಪದಾಧಿಕಾರಿಯಾಗಿದ್ದ ಅವರು ಸವಣೂರು ಬಳಿಯ ಪರಣೆ ಎಂಬಲ್ಲಿ ಸ್ವಂತ ಖರ್ಚಿಯಲ್ಲಿ ಮಸೀದಿಯೊಂದನ್ನು ನಿರ್ಮಿಸಿ, ವಕ್ಫ್ ಮಾಡಿದ್ದರು. ಮಾತ್ರವಲ್ಲ ಇದೇ ಮಸೀದಿಯ ಖಬರಸ್ತಾನದಲ್ಲಿ ತನ್ನ ಅಂತ್ಯಸಂಸ್ಕಾರ ನೆರವೇರಿಸುವಂತೆ ವಸಿಯ್ಯತ್ ಮಾಡಿದ್ದರು. ಅವರ ಇಚ್ಛೆಯಂತೆ ಸೋಮವಾರ ಬೆಳಗ್ಗೆ ಇದೇ ಖಬರಸ್ತಾನದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಸೋಮವಾರ ಬೆಳಗ್ಗೆ ಸುಬಹ್ ನಮಾಝ್ ನ ಬಳಿಕ ಪುತ್ತೂರಿನ ಬದ್ರಿಯಾ ಮಸೀದಿಯಲ್ಲಿ ಜನಾಝ ನಮಾಝ್ ನಿರ್ವಹಿಸಿ ಪರಣೆ ಖಬರಸ್ತಾನದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಇಸ್ಮಾಯೀಲ್ ಹಾಜಿ ಅವರು ಡೆಪ್ಯುಟಿ ತಹಶೀಲ್ದಾರ್ ಆಗುವ ಮೊದಲು ಬಿಡಿಒ ಮ್ಯಾನೇಜರ್ ಆಗಿಯೂ, ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಬಂಟ್ವಾಳ, ಉಪ್ಪಿನಂಗಡಿ, ಪುತ್ತೂರು, ವಿಟ್ಲ, ಮಂಗಳೂರು, ಹುಣಸೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಸ್ಮಾಯೀಲ್ ಅವರು ಕರ್ತವ್ಯ ನಿರ್ವಹಿಸಿದ್ದರು.
ಇಸ್ಮಾಯೀಲ್ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಖಾದರ್ ಪುತ್ತೂರು ಸೇರಿದಂತೆ ಆರು ಮಂದಿ ಪುತ್ರರು, ಓರ್ವ ಪುತ್ರಿ, ಪತ್ನಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.



Join Whatsapp