ಪಾಕಿಸ್ತಾನಕ್ಕೆ ಬೇಹುಗಾರಿಕೆ | ಭಾರತೀಯ ಸೇನೆಯ ನಿವೃತ್ತ ಯೋಧ ಸೌರಭ್ ಶರ್ಮಾ ಬಂಧನ

Prasthutha|

ಲಖನೌ : ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಭಾರತೀಯ ಸೇನೆಯ ನಿವೃತ್ತ ಯೋಧನೊಬ್ಬನನ್ನು ಬಂಧಿಸಿದೆ. ಲಖನೌ ಮೂಲದ ಸೇನಾ ಗುಪ್ತಚರ ಮೂಲಗಳು ನೀಡಿದ ಮಾಹಿತಿಯನ್ನಾಧರಿಸಿ ಈ ಬಂಧನ ನಡೆದಿದೆ. ಬಂಧಿತನನ್ನು ನಿವೃತ್ತ ಯೋಧ ಸೌರಭ್ ಶರ್ಮಾ ಎಂದು ಗುರುತಿಸಲಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

- Advertisement -

ನಿವೃತ್ತ ಯೋಧನನ್ನು ಬಂಧಿಸಲು, ಪತ್ತೆ ಹಚ್ಚಲು ಎಟಿಎಸ್ ಒಂದು ತಿಂಗಳ ಅವಧಿ ತೆಗೆದುಕೊಂಡಿದೆ. ಸೌರಭ್ ಶರ್ಮಾ ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಬಿಹುನಿಯ ತನ್ನ ತವರು ಮನೆಯಲ್ಲಿ ಪತ್ತೆಯಾಗಿದ್ದಾನೆ.

ಸೇನಾ ಗುಪ್ತಚರ ಮೂಲಗಳಿಗೆ ನಿವೃತ್ತ ಸೇನಾ ಸಿಗ್ನಲ್ ಮ್ಯಾನ್ ಶರ್ಮಾನ ಬೇಹುಗಾರಿಕೆ ಚಟುವಟಿಕೆಗಳ ಬಗ್ಗೆ ಕುರುಹು ಸಿಕ್ಕಿತ್ತು. ಸಣ್ಣ ಸುಳಿವೊಂದರ ಆಧಾರದಲ್ಲಿ ಕಾರ್ಯಾಚರಣೆ ಮಾಡಿ ಶರ್ಮಾನನ್ನು ಬಂಧಿಸಲಾಗಿದೆ.

- Advertisement -

2014ರಿಂದ ತಾನು ಪಾಕಿಸ್ತಾನದ ಗುಪ್ತಚರ ನಿರ್ವಹಣಾ ವಿಭಾಗದ ಸಂಪರ್ಕಕ್ಕೆ ಫೇಸ್ ಬುಕ್ ಮೂಲಕ ಬಂದೆ ಎಂದು ಬೇಹುಗಾರಿಕೆಯಲ್ಲಿ ಭಾಗಿಯಾದುದನ್ನು ಒಪ್ಪಿಕೊಂಡಿರುವ ಶರ್ಮಾ ತಿಳಿಸಿದ್ದಾನೆ.

 ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದ ಪತ್ರಕರ್ತನೆಂದು ಹೇಳಿಕೊಂಡ ವ್ಯಕ್ತಿಯ ಸಂಪರ್ಕದ ಮೂಲಕ ಸೇನೆಯ ಸೂಕ್ಷ್ಮ ಮಾಹಿತಿಗಳನ್ನು 2016ರಿಂದ ಹಂಚಿಕೊಂಡಿರುವುದಾಗಿ ಶರ್ಮಾ ಒಪ್ಪಿಕೊಂಡಿದ್ದಾನೆ. ಫೋಟೊ. ಆಡಿಯೊ, ಟೆಕ್ಸ್ಟ್ ಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದೆ. ವಾಟ್ಸಪ್ ಕರೆ ಮೂಲಕವೂ ಮಾಹಿತಿ ನೀಡಿದ್ದುದಾಗಿ ಶರ್ಮಾ ಒಪ್ಪಿಕೊಂಡಿದ್ದಾನೆ.

ಹಣಕ್ಕಾಗಿ ತಾನು ಈ ಕೆಲಸ ಮಾಡಿದ್ದುದಾಗಿ ಮತ್ತು ಇದಕ್ಕಾಗಿ ತನಗೆ ಹಲವು ಸಲ ಪಾವತಿಸಲಾಗಿದೆ ಎಂದು ಶರ್ಮಾ ಹೇಳಿದ್ದಾನೆ. ವೈದ್ಯಕೀಯ ಕಾರಣಗಳಿಗಾಗಿ ಶರ್ಮಾನನ್ನು ಸೇನೆಯಿಂದ 2020ರಲ್ಲಿ ಬಿಡುಗಡೆ ಮಾಡಲಾಗಿದೆ.

ಲಖನೌನ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಮತ್ತು ಅಧಿಕೃತ ಗೌಪ್ಯ ಕಾಯ್ದೆಯ ಹಲವು ಕಲಂಗಳಡಿ ಪ್ರಕಣ ದಾಖಲಿಸಲಾಗಿದೆ.  



Join Whatsapp