ಯಡ್ಡಿ ಸರಕಾರಕ್ಕೆ ಮತ್ತೊಂದು ಪ್ರತಿಭಟನೆಯ ಸಂಕಷ್ಟ | ನ್ಯಾ. ಸದಾಶಿವ ಆಯೋಗ ವರದಿ ಜಾರಿಗಾಗಿ ಮಾ.8ರಂದು ಬೃಹತ್ ಚಳವಳಿ

Prasthutha|

ಯಡಿಯೂರಪ್ಪ ಸರಕಾರಕ್ಕೆ ಮತ್ತೊಂದು ಹೋರಾಟದ ಸಂಕಷ್ಟ | ಒಳಮೀಸಲಾತಿ ಕುರಿತ ನ್ಯಾ. ಸದಾಶಿವ ಆಯೋಗ ವರದಿ ಜಾರಿಗಾಗಿ ಮಾ.8ರಂದು ಬೃಹತ್ ಚಳವಳಿ

- Advertisement -

ಬೆಂಗಳೂರು : ಈಗಾಗಲೇ ಸಾಕಷ್ಟು ಪ್ರತಿಭಟನೆಗಳನ್ನು ಎದುರಿಸುತ್ತಿರುವ ರಾಜ್ಯ ಬಿಜೆಪಿ ಸರಕಾರಕ್ಕೆ ಮತ್ತೊಂದು ಬೃಹತ್ ಪ್ರತಿಭಟನೆ ಎದುರಿಸಬೇಕಾದ ಅನಿವಾರ್ಯತೆ ಬಂದಿದೆ.

ಒಳಮೀಸಲಾತಿ ಕುರಿತು ನ್ಯಾ. ಸದಾಶಿವ ಆಯೋಗ 2012ರಲ್ಲಿ ನೀಡಿದ್ದ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ನ್ಯಾ. ಸದಾಶಿವ ಆಯೋಗ ವರದಿ ಜಾರಿ ಹೊರಾಟ ಸಮಿತಿ ಮಾ.8ರಂದು ಬೃಹತ್ ಚಳವಳಿಗೆ ಕರೆ ನೀಡಿದೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಅಂದು ‘ಮಾದಿಗ ಚೈತನ್ಯ ರಥಯಾತ್ರೆ” ನಡೆಸಲು ಈಗಾಗಲೇ ರಾಜ್ಯಾದ್ಯಂತ ಸಿದ್ಧತೆ ನಡೆಯುತ್ತಿದೆ. ಒಳ ಮೀಸಲಾತಿ ಕುರಿತ ದಶಕಗಳ ಹೋರಾಟಕ್ಕೆ ಆ ಮೂಲಕ ಹೊಸ ತಿರುವು ದೊರೆಯಲಿದೆ ಎನ್ನಲಾಗುತ್ತಿದೆ.

- Advertisement -

ಫೆ.20ರಿಂದ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಚಿಕ್ಕಬಳ್ಳಾಪುರದಿಂದ ಆರಂಭವಾಗಿದೆ. ರಾಜ್ಯಾದ್ಯಂತ ಈ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಸಮಿತಿಯ ಪ್ರಮುಖರು ನಾಲ್ಕು ಸುತ್ತು ರಾಜ್ಯ ಪ್ರವಾಸ ಮಾಡಿ ಈ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಅಲ್ಲದೆ, ಮಾ.8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಹೋರಾಟ ನಡೆಯಲಿದೆ ಎಂದು ನ್ಯಾ. ಸದಾಶಿವ ಆಯೋಗ ವರದಿ ಜಾರಿ ಹೋರಾಟದ ಮುಂಚೂಣಿಯಲ್ಲಿರುವ ನ್ಯಾಯವಾದಿ ಹರಿರಾಮ್ ಅವರು ‘ಪ್ರಸ್ತುತ’ಕ್ಕೆ ತಿಳಿಸಿದ್ದಾರೆ.

ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಎ.ಜೆ. ಸದಾಶಿವ ಆಯೋಗ ನೀಡಿದ ವರದಿಯನ್ನು ಕೊಟ್ಟ ಮಾತಿನಂತೆ ಬಿಜೆಪಿ ಸರಕಾರ ಜಾರಿಗೊಳಿಸಬೇಕು. ಈಗಾಗಲೇ ಒಳ ಮೀಸಲಾತಿ ಜಾರಿಗೆ ತರುವಲ್ಲಿ ವಿಫಲರಾಗಿರುವುದಕ್ಕೆ ತಮ್ಮ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ. ಹೀಗಾಗಿ, ಕೊಟ್ಟ ಮಾತನ್ನು ನಡೆಸದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಈಗಾಗಲೇ ಬುದ್ಧಿ ಬಂದಿದೆ. ಬಿಜೆಪಿ ಕೂಡ ತಾನು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು ಎಂಬುದು ಒಳ ಮೀಸಲಾತಿ ಹೋರಾಟಗಾರರ ಒತ್ತಾಯವಾಗಿದೆ.

ಈಗಾಗಲೇ ರಾಜ್ಯ ಸರಕಾರಕ್ಕೆ ಪಂಚಮಸಾಲಿ ಲಿಂಗಾಯತರ ಮತ್ತು ಕುರುಬ ಜನಾಂಗದ ಎಸ್ಟಿ ಮೀಸಲಾತಿ ಹೋರಾಟದ ಬಿಸಿ ತಟ್ಟಿದೆ. ಇದೀಗ ಪರಿಶಿಷ್ಟ ಸಮುದಾಯಗಳ ಒಳಮೀಸಲಾತಿ ಹೋರಾಟ ಸರಕಾರಕ್ಕೆ ಹೊಸ ಸವಾಲನ್ನುಂಟು ಮಾಡಿದ್ದು, ಸರಕಾರ ಯಾವ ಕಾರ್ಯಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕು.  



Join Whatsapp