ಪಿಎಫ್’ಐ ಮಾಜಿ ಅಧ್ಯಕ್ಷ ಇ. ಅಬೂಬಕ್ಕರ್ ಆರೋಗ್ಯ ಸ್ಥಿತಿಯ ಬಗ್ಗೆ ತಕ್ಷಣ ವರದಿ ಸಲ್ಲಿಸಿ: ಎನ್’ಐಎಗೆ ದೆಹಲಿ ಹೈಕೋರ್ಟ್

Prasthutha|

ನವದೆಹಲಿ: ಬಂಧಿತ ಪಿಎಫ್’ಐ ಮಾಜಿ ಅಧ್ಯಕ್ಷ ಇ. ಅಬೂಬಕ್ಕರ್ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, ಏಮ್ಸ್’ನ ತಜ್ಞ ವೈದ್ಯರ ಅಭಿಪ್ರಾಯ ಸೇರಿದಂತೆ ಅಬೂಬಕ್ಕರ್ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ತಕ್ಷಣ ವರದಿ ಸಲ್ಲಿಸುವಂತೆ ಎನ್’ಐಎಗೆ ನಿರ್ದೇಶನ ನೀಡಿದೆ.

70 ವರ್ಷ ಪ್ರಾಯದ ಅಬೂಬಕ್ಕರ್ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಅವರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ, ಅವರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಅಂತಿಮವಾಗಿ ನಾವು ಏಮ್ಸ್’ನ ವೈದ್ಯಕೀಯ ಮಂಡಳಿಯನ್ನು ರಚಿಸಲು ನಿರ್ದೇಶಿಸಬೇಕೇ ಅಥವಾ ಬೇಡವೇ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಚಿಕಿತ್ಸೆಯ ವಿಷಯದಲ್ಲಿ ಅವರಿಗೆ ಉತ್ತಮ ಮಾರ್ಗ ಯಾವುದು ಎಂದು ಈ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ದೆಹಲಿ ಹೈಕೋರ್ಟ್ ಎನ್’ಐಎಗೆ ಸೂಚಿಸಿತು.

- Advertisement -

ಅವರ ರೋಗನಿರ್ಣಯ ಮತ್ತು ಶಿಫಾರಸು ಮಾಡಲಾದ ಚಿಕಿತ್ಸೆ ಯಾವುದು? ಖಂಡಿತವಾಗಿಯೂ ಅವರು 2024 ರವರೆಗೆ ಸ್ಕ್ಯಾನ್ ಗಾಗಿ ಕಾಯಲು ಸಾಧ್ಯವಿಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ. ಅವರು ಒಂದು ಅಪರಾಧದ ಆರೋಪದಲ್ಲಿ ಬಂಧಿತರಾಗಿದ್ದಾರೆ, ಅದು ಬೇರೆ ವಿಷಯ. ಆದರೆ ನಾವು 2024 ರವರೆಗೆ ಕಾಯುತ್ತೇವೆ ಎಂದು ಹೇಳುವುದರಲ್ಲಿ ಅರ್ಥವಲ್ಲ ಎಂದು ನ್ಯಾಯಾಧೀಶರು ಎನ್’ಐಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅವರು ಚಿಕಿತ್ಸೆಗೆ ಅರ್ಹರಲ್ಲ ಎಂಬ ಎನ್’ಐಎ ಅಧಿಕಾರಿಗಳ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನಾವು ಮನುಷ್ಯನ ಆರೋಗ್ಯದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ.  ಅವರ ವಿರುದ್ಧ ದೋಷಾರೋಪಪಟ್ಟಿ ಕೂಡ ಸಲ್ಲಿಸಿಲ್ಲ. ಅವರು ಕೇವಲ ಆರೋಪಿಯಷ್ಟೇ. ವಿಚಾರಣಾಧೀನ ಕೈದಿಯಲ್ಲ. ಈ ಹಂತದಲ್ಲಿ ಕಸ್ಟಡಿಯಲ್ಲಿರುವ ಆರೋಪಿಯನ್ನು ಹೇಗೆ ಉತ್ತಮವಾಗಿ ನಡೆಸಿಕೊಳ್ಳಬೇಕು ಎಂಬುದು ಮಾತ್ರ ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿತು.

- Advertisement -