ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ವಿಧಿ 370ರನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ್ದನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ANC) ಹೇಳಿದೆ.
ತೀರ್ಪು ಹಲವು ದೋಷಗಳಿಂದ ಕೂಡಿದೆ ಎಂದು ಕಾನೂನು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ನಾವು ಈ ತೀರ್ಪನ್ನು ಮರುಪರಿಶೀಲಿಸಲು ಶೀಘ್ರವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ. ಅದಕ್ಕಾಗಿ ನಮ್ಮ ತಂಡ ತಯಾರಿ ನಡೆಸುತ್ತಿದೆ. ಬಿಜೆಪಿ ಸರ್ಕಾರದ ನಿಷೇಧ ಕ್ರಮವನ್ನು ಜಮ್ಮು ಕಾಶ್ಮೀರ ಜನತೆ ಒಪ್ಪಿಲ್ಲ. ನಾವು ಇನ್ನು ಈ ವಿಷಯವನ್ನು ಮುಗಿಸಿಲ್ಲ. ಇನ್ನು ಹೋರಾಡುತ್ತೇವೆ ಎಂದು ಎಎನ್‌ಸಿ ಹಿರಿಯ ಉಪಾಧ್ಯಕ್ಷ ಮುಝಫರ್ ಶಾ ಹೇಳಿದ್ದಾರೆ.
ಕೇಂದ್ರ ಸರ್ಕಾರ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ (ಆರ್ಟಿಕಲ್ 370) ರದ್ದು ಮಾಡಿತ್ತು. ಕೇಂದ್ರದ ನಿರ್ಧಾರದ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಡಿಸೆಂಬರ್ 11ಕ್ಕೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. 370ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿತ್ತು ಎಂದು ಪಂಚ ಸದಸ್ಯ ಸಾಂವಿಧಾನಿಕ ಪೀಠ ಹೇಳಿತ್ತು.