ನವದೆಹಲಿ: ಖ್ಯಾತ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ (83) ಹೃದಯಾಘಾತದಿಂದ ದೆಹಲಿಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು. ವರದಿಗಳ ಪ್ರಕಾರ, ಬಿರ್ಜು ಮಹಾರಾಜ್ ಭಾನುವಾರ ರಾತ್ರಿ ತನ್ನ ಮೊಮ್ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆರೋಗ್ಯ ಸ್ಥಿತಿ ಹದಗೆಟ್ಟು ಪ್ರಜ್ಞೆ ತಪ್ಪಿ ಬಿದ್ದರು. ತಕ್ಷಣ ದೆಹಲಿಯ ಸಾಕೇತ್ ಆಸ್ಪತ್ರೆಗೆ ಸಾಗಿಸಿದರೂ ಜೀವವುಳಿಸಲು ಸಾಧ್ಯವಾಗಲಿಲ್ಲ. ಮಹಾರಾಜ್ ಅವರು ಕೆಲವು ದಿನಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು ಡಯಾಲಿಸಿಸ್ ಗೆ ಒಳಗಾಗಿದ್ದರು.
ಮಹಾರಾಜ್ ಅವರಿಗೆ ದೇಶ ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅವರ ಪ್ರೀತಿಪಾತ್ರರು ಮತ್ತು ಶಿಷ್ಯರು ಅವರನ್ನು ಪಂಡಿತ್ ಜೀ, ಮಹಾರಾಜ್ ಜೀ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಮಹಾರಾಜ್ ಅವರು ಭಾರತದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರು.
ಮಹಾರಾಜ್ ಕುಟುಂಬವು ಕಥಕ್ ನೃತ್ಯಕ್ಕೆ ಹೆಸರುವಾಸಿಯಾಗಿದೆ. ತಂದೆ ಅಚ್ಚನ್ ಮಹಾರಾಜ್ ಮಾವಂದಿರಾದ ಶಂಭು ಮಹಾರಾಜ್ ಮತ್ತು ಲಚ್ಚು ಮಹಾರಾಜ್ ಇವರೆಲ್ಲರೂ ಪ್ರಸಿದ್ಧ ಕಥಕ್ ನೃತ್ಯಗಾರರು. ಮಹಾರಾಜ್ ಅವರು ತಂದೆಯ ಬಳಿಯೇ ಕಥಕ್ ನೃತ್ಯವನ್ನು ಕಲಿತುಕೊಂಡಿದ್ದರು. ಬಿರ್ಜು ಮಹಾರಾಜ್ ಕೇವಲ ನೃತ್ಯಗಾರ ಮಾತ್ರವಲ್ಲದೆ ಗಾಯಕರೂ ಆಗಿದ್ದು ಹಿಂದೂಸ್ತಾನಿ ಸಂಗೀತವನ್ನು ಕಲಿತಿದ್ದಾರೆ.ತುಮ್ರಿ, ದಾದ್ರಾ, ಭಜನ್ ಮತ್ತು ಗಝಲ್ ನಲ್ಲಿ ಪರಿಣತಿ ಪಡೆದ ಬಿರ್ಜು ಮಹಾರಾಜ್ ಉತ್ತಮ ಗಾಯಕರಾಗಿದ್ದರು. ತಮ್ಮ ಜೀವನದ ಘಟನೆಗಳನ್ನು ಕಲೆಯಲ್ಲಿ ಪ್ರಸ್ತುತಪಡಿಸುವ ಮೂಲಕ ಕಲಾವಿದರನ್ನು ದಿಗ್ಭ್ರಮೆಗೊಳಿಸಿದ ನೃತ್ಯಗಾರರಾಗಿದ್ದರು ಪಂಡಿತ್ ಬಿರ್ಜು ಮಹಾರಾಜ್.