ಉಡುಪಿ: ಖ್ಯಾತ ಸಾರಿಗೆ ಉದ್ಯಮಿ ಪಿ. ರಬೀಂದ್ರ ನಾಯಕ್ (99) ಅವರು ಸುದೀರ್ಘ ಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ ಅಸ್ತಂಗತರಾಗಿದ್ದಾರೆ.
ಮಂಗಳೂರಿನ ದಿಗಂತ ಮುದ್ರಣದಲ್ಲಿ 1990ರಿಂದ 2012ರವರೆಗೆ 22 ವರ್ಷಗಳ ಕಾಲ ನಿರ್ದೇಶಕರೂ ಆಗಿದ್ದ ಪಾಂಗಾಳ ರಬೀಂದ್ರ ನಾಯಕ್ ಅವರು, 1922ರ ಫೆಬ್ರವರಿ 9ರಂದು ಉಡುಪಿಯಲ್ಲಿ ಜನಿಸಿದರು. ಬಾಂಬೆ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದ ಅವರು 1945-50ರ ಅವಧಿಯಲ್ಲಿ ಹೊಸದಿಲ್ಲಿಯ ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್, ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯಲ್ಲಿ ಟೆಕ್ನಾಲಜಿಸ್ಟ್ ಆಗಿ ಕೆಲಸ ಮಾಡಿದ್ದರು. ರಾಯಲ್ ಇಂಡಿಯನ್ ನೇವಿಯಲ್ಲಿ ತಾಂತ್ರಿಕ ಸಹಾಯಕರಾಗಿಯೂ ಕೆಲಸ ಮಾಡಿದ್ದರು.
ಅವರು 1951ರಲ್ಲಿ ಹನುಮಾನ್ ಟ್ರಾನ್ಸ್ಪೋರ್ಟ್ ಕಂಪನಿಗೆ ಸೇರಿದ ನಂತರ, 1972ರಲ್ಲಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಏರಿದರು. ಹಲವಾರು ದಶಕಗಳವರೆಗೆ ಯಶಸ್ವಿಯಾಗಿ ಕಂಪನಿಗೆ ಸೇವೆ ಸಲ್ಲಿಸಿದರು. ಕೆಲಕಾಲ ಅವರು ಶ್ರೀಗಜಾನನ ಮೋಟಾರ್ ಟ್ರಾನ್ಸ್‌ಪೋರ್ಟ್ ಕಂ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಪಿ.ರಬೀಂದ್ರ ನಾಯಕ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.