ನವದೆಹಲಿ: ದೇಶದ ಅತಿ ದೊಡ್ಡ ಹೋಲ್ ಸೇಲ್ ಮತ್ತು ಫುಡ್ ರೀಟೈಲ್ ಸಂಸ್ಥೆ ‘ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ’ ಅನ್ನು 2,850 ಕೋಟಿ ರೂಪಾಯಿಗೆ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಅಧೀನ ಸಂಸ್ಥೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಖರೀದಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್’ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್, ಮೆಟ್ರೋ ಕ್ಯಾಶ್ ಮತ್ತು ಕ್ಯಾರಿ ಇಂಡಿಯಾದಲ್ಲಿ 100 ಪ್ರತಿಶತದಷ್ಟು ಪಾಲನ್ನು ಪಡೆಯಲು ಕಾರ್ಯತಂತ್ರದ ಒಪ್ಪಂದಕ್ಕೆ ಸಹಿ ಹಾಕಿದೆ. 2850 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಪಾವತಿಸಲು ಸಿದ್ಧವಾಗಿದೆ. ಈ ಒಪ್ಪಂದವು ಮಾರ್ಚ್ 2023 ರೊಳಗೆ ಪೂರ್ಣಗೊಳ್ಳಲಿದೆ.
ಚಿಲ್ಲರೆ ಉದ್ಯಮದಲ್ಲಿ ಆಕ್ರಮಣಕಾರಿ ದಾಪುಗಾಲು ಹಾಕುತ್ತಿರುವ ಜರ್ಮನ್ ಮೂಲದ ಚಿಲ್ಲರೆ ವ್ಯಾಪಾರಿ ಸಂಸ್ಥೆ ಮೆಟ್ರೋ ಎಜಿ ಒಡೆತನದ ಭಾರತೀಯ ಘಟಕಗಳು ಇನ್ನು ಮುಂದೆ ಮುಖೇಶ್ ಅಂಬಾನಿ ಒಡೆತನದಲ್ಲಿ ಇರಲಿವೆ.
2003ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಮೆಟ್ರೋ ಹೋಲ್ ಸೇಲ್ ಮಳಿಗೆಗಳು ಸಕ್ರಿಯವಾಗಿವೆ. ರೆಸ್ಟೋರೆಂಟ್’ಗಳು ಮತ್ತು ದಿನಸಿ ಅಂಗಡಿಗಳಿಗೆ ಅಗತ್ಯವಸ್ತು ಪೂರೈಕೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಎಲೆಕ್ಟ್ರಾನಿಕ್ಸ್, ದಿನಸಿ ಮತ್ತು ಫ್ಯಾಶನ್ ಪರಿಕರ ಮಾರುಕಟ್ಟೆಯಲ್ಲೂ ಮುಂಚೂಣಿಯಲ್ಲಿರುವ ರಿಲಯನ್ಸ್, ಇದೀಗ ಚಿಲ್ಲರೆ ಉದ್ಯಮಕ್ಕೂ ಕಾಲಿಟ್ಟಿದೆ.
ಬೆಂಗಳೂರು ಸೇರಿದಂತೆ ದೇಶದ 21 ನಗರಗಳಲ್ಲಿ 31 ಮೆಟ್ರೋ ಹೋಲ್ ಸೇಲ್ ಮಳಿಗೆಗಳಿವೆ. ಸುಮಾರು 3500 ಉದ್ಯೋಗಿಗಳಿದ್ದಾರೆ.