ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಿ: ಗೃಹ ಸಚಿವ ಆರಗ ಜ್ಞಾನೇಂದ್ರ

Prasthutha|

ತುಮಕೂರು: ತುಮಕೂರು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಹೆರಿಗೆ ಸಮಯದಲ್ಲಿ ತಾಯಿ – ಶಿಶು ಮರಣ ಪ್ರಮಾಣ ಹೆಚ್ಚಿದ್ದು ವಿಶೇಷ ಆರೋಗ್ಯ ಕಾಳಜಿ ವಹಿಸಿ ಸಾವಿನ ಪ್ರಮಾಣವನ್ನು ತಗ್ಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ನಿರ್ದೇಶಿಸಿದ್ದಾರೆ.

- Advertisement -

ಸಚಿವರು ಇಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತುಮಕೂರು ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ” ಜಿಲ್ಲೆಯ ಕೆಲವು ತಾಲೂಕುಗಳಲ್ಲಿ,  ತಾಯಿ – ಶಿಶು ಮರಣ ಪ್ರಮಾಣ ಹೆಚ್ಚಿದ್ದು ಇದು ಆತಂಕಕಾರಿ ವಿಷಯ ” ಎಂದು ಹೇಳಿದರು

ಹೆರಿಗೆ ಸಮಯದಲ್ಲಿ ತಾಯಿ ಅಥವಾ ಶಿಶುವಿನ ಮರಣ ಪ್ರಮಾಣ ‘ ಶೂನ್ಯ’ ಆಗಿರಬೇಕು ಎಂಬುದು, ಸರಕಾರದ ಆಶಯ. ಪ್ರಸವ ಪೂರ್ವ ಹಾಗೂ ನಂತರದ ತಾಯಿ ಹಾಗೂ ಮಗುವಿನ ಆರೋಗ್ಯ ರಕ್ಷಣೆಗೆ ಹಾಗೂ ಪೌಷ್ಟಿಕತೆ ಕಾಪಾಡಲು, ಸರಕಾರ ವಿಶೇಷ ಅನುದಾನ ನೀಡುತ್ತಿದ್ದು, ಅದರ ಸದುಪಯೋಗ ಆಗಬೇಕು ಎಂದು ಆಗ್ರಹಿಸಿದರು.

- Advertisement -

” ಜಿಲ್ಲೆಯಲ್ಲಿ ಒಬ್ಬ ತಾಯಿಯೂ ಮತ್ತು ಒಂದು ಮಗುವೂ ಪ್ರಸವ ಸಮಯದಲ್ಲಿ ಮರಣ ಹೊಂದುವ ಒಂದು ಪ್ರಕರಣವೂ ನಡೆಯಬಾರದು, ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು” ಎಂದು ಸಚಿವರು ನಿರ್ದೇಶಿಸಿದರು.

ಎಲ್ಲಾ ಸೌಲಭ್ಯಗಳನ್ನೂ ಹೊಂದಿದ್ದರೂ, ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆಂದು ದಾಖಲಾಗುವವರ ಸಂಖ್ಯೆ ಬಹಳ ಕಡಿಮೆ ಎಂದು ಅಭಿಪ್ರಾಯ ಪಟ್ಟ ಸಚಿವರು,  ಕಾರಣಗಳನ್ನು ವಿಶ್ಲೇಷಿಸಿ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ತಾಕೀತು ಮಾಡಿದರು.

ಕೇಂದ್ರ ಪ್ರಾಯೋಜಿತ ಆಯುಷ್ಮನ್ ಆರೋಗ್ಯ ಯೋಜನೆಯ ಬಗ್ಗೆ ಮಾಹಿತಿ ಪಡೆದ ಸಚಿವರು, ಖಾಸಗಿ ರಂಗದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸಿಕೊಳ್ಳಲು ಬಡವರಿಗೆ ಹಾಗೂ ದಲಿತ ಸಮುದಾಯದವರಿಗೆ ದುಬಾರಿಯಾಗಿದ್ದು, ಅವರು ಶೋಷಣೆಗೆ ಒಳಗಾದಂತೆ ರಕ್ಷಿಸಬೇಕಿದೆ ಎಂದು ಸಚಿವರು ಕಳಕಳಿಯಿಂದ ನುಡಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ಸೌಲಭ್ಯಗಳಿ ದ್ದರೂ ಲ್ಯಾಬೋರೇಟರಿ ಸೇವೆ ಜನತೆಗೆ ಸಿಗುತ್ತಿಲ್ಲ ಎಂದು ವಿಷಾದಿಸಿದ ಸಚಿವರು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಬೇಕು ಎಂದೂ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ Covid-19 ಹತೋಟಿಗೆ ಬಂದಿದೆ, ಮತ್ತು ಸುಮಾರು ೮೦೦ ಕೋರೋನ ಸಂಬಂಧಿತ ಸಾವಿನ ಸಂಬಂಧ ನೀಡಲಾಗುವ ನಗದು ಪರಿಹಾರ ಅರ್ಜಿಗಳನ್ನು ಮಾನ್ಯ ಮಾಡಿದ್ದು, ಸರಿ ಸುಮಾರು ೭೮೦ ಅರ್ಜಿದಾರರಿಗೆ, ಪರಿಹಾರ ವಿತರಿಸಲಾಗಿದೆ, ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು, ಸಭೆಗೆ ತಿಳಿಸಿದರು.

Covid-19 ನಿಂದ ಮರಣ ಸಂಭವಿಸಿದೆ ಎಂದು ವೈದ್ಯರು ಪ್ರಮಾಣೀಕರಿಸಿದ ಎಲ್ಲಾ ಪ್ರಕರಣದಲ್ಲಿಯೂ ಪರಿಹಾರ ವಿತರಿಸಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.

” ದಾಖಲೆ ಯಿಂದ ಬಿಟ್ಟು ಹೋದ ಆದರೆ ಕೋವಿಡ್ ನಿಂದ ಮರಣ ಹೊಂದಿದ ಎಲ್ಲಾ ವಾರಸುದಾರ ರಿಗೆ ಪರಿಹಾರ ನೀಡಲು ಪರಿಶೀಲನೆ ಮಾಡಬೇಕೆಂದೂ ಸಚಿವರು, ಸೂಚಿಸಿದರು.

ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳನ್ನು, ತರಾಟೆಗೆ ತೆಗೆದುಕೊಂಡ ಸಚಿವರು, ಈ ತಿಂಗಳ ಅಂತ್ಯದೊಳಗೆ, ಪ್ರಧಾನ ಮಂತ್ರಿ ಶ್ರಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷಿ ” ಬೆಳಕು” ಯೋಜನೆಯಡಿ ಎಲ್ಲಾ ವಸತಿಗಳಿಗೆ, ವಿದ್ಯುತ್ ಸಂಪರ್ಕ ದೊರಕಿಸಿಕೊಡಬೇಕು. ಜಿಲ್ಲೆಯಲ್ಲಿ ಒಂದು ಮನೆಯೂ ವಿದ್ಯುತ್ ಸಂಪರ್ಕ ರಹಿತ ವಾಗಿರಬಾರದು, ಎಂದು ನಿರ್ದೇಶಿಸಿದರು.

ಜಿಲ್ಲೆಯಲ್ಲಿ, ಹೇಮಾವತಿ ನೀರಾವರಿ ಮುಖ್ಯ ಕಾಲುವೆಗಳು ಹಾಗೂ ಫೀಡರ್ ಕಾಲುವೆಗಳು ಹೂಳು ಹಾಗೂ ಕಸಕಡ್ಡಿ ಯಿಂದ ಕೂಡಿದ್ದು, ತಕ್ಷಣ ಕ್ರಮ ಕೈಗೊಂಡು, ರೈತರಿಗೆ ನೀರು ಹರಿಸ ಬೇಕೆಂದೂ, ಸೂಚಿಸಿದರು.

ಸಭೆಯಲ್ಲಿ, ಪ್ರಾಥಮಿಕ ಶಿಕ್ಷಣ ಸಚಿವ ಶ್ರೀ B C ನಾಗೇಶ್, ಜಿಲ್ಲೆಯ ಶಾಸಕರೂ, ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲೆಯ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp