ಕೆಂಪು ಕೋಟೆ ಹಿಂಸಾಚಾರ: ಮತ್ತೋರ್ವ ಯುವ ರೈತನ ಬಂಧನ

Prasthutha|

ನವ ದೆಹಲಿ: ಕೆಂಪುಕೋಟೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವ ರೈತರೊಬ್ಬರನ್ನು ಬಂಧಿಸಲಾಗಿದೆ.
ಗುರ್ಜೋತ್ ಸಿಂಗ್ ಬಂಧಿತ ರೈತ. ದೆಹಲಿ ಹಿಂಸಾಚಾರದ ಬಳಿಕ ಇವರು ತಲೆಮರೆಸಿಕೊಂಡಿದ್ದರು. ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ಬಹುಮಾನ ಘೋಷಿಸಲಾಗಿತ್ತು. ಇವರನ್ನು ಪಂಜಾಬಿನ ಅಮೃತಸರದಿಂದ ಭಾನುವಾರ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.

- Advertisement -


ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ 17ಕ್ಕೇರಿದೆ. ತಲೆಗೆ ಬಹುಮಾನ ಘೋಷಿಸಲ್ಪಟ್ಟ ಕನಿಷ್ಠ ಆರು ಪ್ರಮುಖ ಶಂಕಿತರು ಇನ್ನೂ ಪರಾರಿಯಾಗಿದ್ದಾರೆ.


ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೇಂದ್ರವು ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಗಣರಾಜ್ಯೋತ್ಸವದಂದು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಜಾಥಾ ವೇಳೆ ಕೆಂಪು ಕೋಟೆಯಲ್ಲಿ ಹಿಂಸಾಚಾರ ನಡೆದಿತ್ತು.
ಘಟನೆಯ ಬಳಿಕ ಗುರ್ಜೋತ್ ಸಿಂಗ್ , ಸಿಂಘು ಗಡಿಯಿಂದ ತಪ್ಪಿಸಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಗುರ್ಜೋತ್ ಕೃಷಿಕನಾಗಿದ್ದು, ತರ್ನ್ ತರಣ್ ಜಿಲ್ಲೆಯ ತಲ್ವಾಂಡಿ ಶೋಭಾ ಸಿಂಗ್ ಗ್ರಾಮದ ನಿವಾಸಿ ಎಂದು ಮೂಲಗಳು ತಿಳಿಸಿವೆ.
ಗುರ್ಜೋತ್ ಸಿಂಗ್ ಹಲವಾರು ಬಾರಿ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜನವರಿ 26 ರಂದು ಅವರು ಗ್ರಾಮದ ಮೂವರು ಸ್ನೇಹಿತರೊಂದಿಗೆ ತಮ್ಮ ಟ್ರ್ಯಾಕ್ಟರ್ ಗಳಲ್ಲಿ ದೆಹಲಿಗೆ ಪ್ರವೇಶಿಸಿ ಕೆಂಪು ಕೋಟೆಗೆ ಆಗಮಿಸಿದ್ದಾರೆ. ಸುದ್ದಿ ಚಾನೆಲ್ಗಳಿಂದ ದೊರೆತ ಹಲವಾರು ತುಣುಕುಗಳನ್ನು ಪೊಲೀಸರು ಪತ್ತೆ ಹಚ್ಚಿದ ನಂತರ ಗುರ್ಜೋತ್ ಸಿಂಗ್ ಅಲ್ಲಿಗೆ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಿಂಸಾಚಾರ ಘಟನೆಯ ನಂತರ ಸಿಂಗ್ ಸುದ್ದಿವಾಹಿನಿಯೊಂದಕ್ಕೆ ಬೈಟ್ ನೀಡುತ್ತಿರುವುದು ಕಂಡುಬಂದಿದೆ. ಕೆಂಪು ಕೋಟೆಯಲ್ಲಿ ವಿಧ್ವಂಸಕ ಕೃತ್ಯದ ಕೆಲವು ಗಂಟೆಗಳ ನಂತರ, ಅವರು ತಮ್ಮ ಗ್ರಾಮಕ್ಕೆ ಹೋಗಿದ್ದಾರೆ. ಅಂದಿನಿಂದ ಅವರು ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Join Whatsapp