ಪೊಲೀಸ್ ಸಿಬ್ಬಂದಿ ನೇಮಕಾತಿ; ಎರಡು ವರ್ಷಗಳಾದರೂ ಆದೇಶ ಏಕೆ ಪಾಲಿಸಿಲ್ಲ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Prasthutha|

ಬೆಂಗಳೂರು: ನ್ಯಾಯಾಲಯದ ಆದೇಶಕ್ಕೆ ಎರಡು ವರ್ಷಗಳಾದರೂ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 5,500ಕ್ಕೂ ಹೆಚ್ಚು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಪೇದೆಗಳ ಹುದ್ದೆಯನ್ನು ಭರ್ತಿ ಮಾಡದ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.

- Advertisement -


ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅಗತ್ಯ ನಿರ್ದೇಶನ ನೀಡುವ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆಯೇ ಎಂದು ಪೀಠವು ಸರ್ಕಾರದ ವಕೀಲರನ್ನು ಪ್ರಶ್ನಿಸಿತು. ಆಗ ಅವರು “ಬಹುತೇಕ ಅಂದರೆ ಶೇ. 90ರಷ್ಟು ಆದೇಶ ಪಾಲಿಸಲಾಗಿದೆ. 2022ರ ಜುಲೈ ಅಂತ್ಯದ ವರೆಗೆ ಸಂಪೂರ್ಣವಾಗಿ ಆದೇಶವನ್ನು ಪಾಲಿಸಲಾಗುವುದು” ಎಂದರು.


ಇದರಿಂದ ಕೆರಳಿದ ಪೀಠವು “ನ್ಯಾಯಾಲಯದಲ್ಲಿ ಇಂದು ಪ್ರಕರಣ ವಿಚಾರಣೆಗೆ ಬರುತ್ತದೆ ಎಂಬುದು ತಿಳಿದಿದ್ದರೂ ಅಫಿದವಿತ್ ಒಳಗೊಂಡಂತೆ ಪೂರಕ ಮಾಹಿತಿಯನ್ನು ನೀವೇಕೆ ಸಲ್ಲಿಸುವುದಿಲ್ಲ. ಪ್ರತಿದಿನ ಈ ಬೆಳವಣಿಗೆ ನಡೆಯುತ್ತಿದ್ದು, ಇದು ಏನೆಂದು ನನಗೆ ಅರ್ಥವಾಗುತ್ತಿಲ್ಲ. ಪ್ರಕರಣದ ವಿಚಾರಣೆ ಆರಂಭವಾದಾಗ ಅಫಿಡವಿಟ್ ಸಿದ್ಧವಾಗಿದೆ ಎನ್ನುತ್ತೀರಿ. ಮುಂಚಿತವಾಗಿ ಏಕೆ ನ್ಯಾಯಾಲಯಕ್ಕೆ ಸಲ್ಲಿಸುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿತು.

- Advertisement -


“1,142 ಪಿಎಸ್ ಐ ಮತ್ತು 4,460 ಪೇದೆಗಳ ಹುದ್ದೆಗಳ ನೇಮಕಾತಿಗೆ ಕಾರ್ಯಾಭಾರ ಯೋಜನೆ ಜಾರಿ ಪ್ರಕ್ರಿಯೆ ನಡೆಯುತ್ತಿದೆ. 2022ರ ಜುಲೈ ಅಂತ್ಯಕ್ಕೆ ಇದು ಪೂರ್ಣಗೊಳ್ಳಲಿದೆ” ಎಂದು ಉಲ್ಲೇಖಿಸಿದ್ದೀರಿ. ಪ್ರಕ್ರಿಯೆ ಚಾಲ್ತಿಯಲ್ಲಿರಬೇಕಾದರೆ ಮುಂದಿನ ವರ್ಷದ ಜುಲೈವರೆಗೆ ಕಾಲಾವಕಾಶ ಏತಕ್ಕೆ? ಸಂಬಂಧಪಟ್ಟವರಿಂದ ಸಲಹೆ ಸೂಚನೆ ಪಡೆದು ತಿಳಿಸಿ” ಎಂದು ಆದೇಶಿಸಿತು.
ಇದಕ್ಕೆ ಸರ್ಕಾರದ ವಕೀಲರು “ಪಿಎಸ್ಐ ನೇಮಕಾತಿಗೆ ಹಲವು ಔಪಚಾರಿಕತೆಗಳನ್ನು ಪಾಲಿಸಬೇಕಿದೆ. 16 ಸಾವಿರ ಹುದ್ದೆಗಳ ಪೈಕಿ ಐದು ಸಾವಿರಕ್ಕೂ ಅಧಿಕ ಪಿಎಸ್ಐ ಮತ್ತು ಪೇದೆಗಳ ಹುದ್ದೆಯನ್ನು ಮಾರ್ಚ್ 22ರ ವರೆಗೆ ತುಂಬುತ್ತೇವೆ ಎಂದು ಹೇಳಿದ್ದೆವು. ಕೋವಿಡ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ” ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಲು ಮುಂದಾದರು.


ಇದರಿಂದ ಸಿಡಿಮಿಡಿಗೊಂಡ ನ್ಯಾಯಾಲಯವು “2019ರ ಅಕ್ಟೋಬರ್ನಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ನೀವು ಮೂರು ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದೀರಿ. 2021ರ ಅಂತ್ಯ ಸಮೀಪಿಸುತ್ತಿದ್ದರೂ ನೀವು ಆದೇಶ ಪಾಲಿಸಿಲ್ಲ. ಈಗ ಮತ್ತೆ ಎಂಟು ತಿಂಗಳ ಕಾಲಾವಕಾಶ ವಿಸ್ತರಣೆ ಕೋರುತ್ತಿದ್ದೀರಿ” ಎಂದಿತು.


ಖಾಲಿ ಹುದ್ದೆಗಳ ನೇಮಕಾತಿಗೆ ನಿರ್ದಿಷ್ಟ ಕಾಲಮಿತಿ ತಿಳಿಸುವಂತೆ ಆದೇಶಿಸಿದ ಪೀಠವು “ಸೆಪ್ಟೆಂಬರ್ 22ರ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರದ ಅನುಪಾಲನಾ ವರದಿ ಸ್ವೀಕರಿಸಲಾಗಿದ್ದು, ಬಹುತೇಕ ಆದೇಶವನ್ನು ಪಾಲಿಸಲಾಗಿದೆ. ಖಾಲಿ ಇರುವ 1,142 ಪಿಎಸ್ಐ ಮತ್ತು ನಾಲ್ಕು ಸಾವಿರಕ್ಕೂ ಅಧಿಕ ಪೇದೆ ಹುದ್ದೆಗಳನ್ನು ಮುಂದಿನ ವರ್ಷದ ಜುಲೈ ಒಳಗೆ ತುಂಬಲಾಗಿದೆ ಎಂದು ತಿಳಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವಾಗ ಖಾಲಿ ಹುದ್ದೆಗಳನ್ನು ತುಂಬಲು ಅಷ್ಟು ಕಾಲಾವಕಾಶ ಏತಕ್ಕೆ? ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಎಷ್ಟು ಕಾಲಮಿತಿಯೊಳಗೆ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಸಲಹೆ ಪಡೆಯುವಂತೆ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ” ಎಂದು ಹೇಳಿ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
(ಕೃಪೆ: ಬಾರ್ & ಬೆಂಚ್)



Join Whatsapp