ಛತ್ತೀಸ್ ಗಡ : ಇತ್ತೀಚೆಗಷ್ಟೇ ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಬಂಡಾಯವನ್ನು ಶಮನಗೊಳಿಸಿದ್ದ ಕಾಂಗ್ರೆಸ್‌ನ ಕೇಂದ್ರ ನಾಯಕತ್ವಕ್ಕೆ ಇದೀಗ ಹೊಸ ತಲೆನೋವು ಶುರುವಾಗಿದೆ. ಛತ್ತೀಸ್‌ಗಡದ ಮುಖ್ಯಮಂತ್ರಿ ಬದಲಾವಣೆಗೆ ಅಲ್ಲಿನ ಆರೋಗ್ಯ ಸಚಿವ ಟಿಎಸ್ ಸಿಂಗ್ ದಿಯೋ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದೆ ಇದ್ದರೆ ಅವರು ಸರ್ಕಾರದಿಂದ ಮಾತ್ರವಲ್ಲ, ಪಕ್ಷವನ್ನೂ ತೊರೆಯಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಛತ್ತೀಸ್‌ಗಡದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಜೂನ್ ತಿಂಗಳಿಗೆ ಎರಡು ವರ್ಷಗಳು ತುಂಬಿದೆ. “ಸರ್ಕಾರ ರಚೆನೆಯಾಗುವ ವೇಳೆಗೆ ಎರಡುವರೆ ವರ್ಷಗಳ ನಂತರ ಅಧಿಕಾರವನ್ನು ಹಸ್ತಾಂತರ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಮುಖ್ಯಮಂತ್ರಿ ಭೂಪೇಶ್ ಅವರೇ ಅದಕ್ಕೆ ಒಪ್ಪಿಕೊಂಡಿದ್ದರು” ಎಂದು ಬಂಡಾಯವೆದ್ದಿರುವ ಕಾಂಗ್ರೆಸ್ ನಾಯಕ ಟಿಎಸ್ ಸಿಂಗ್ ದಿಯೋ ಪ್ರತಿಪಾದಿಸುತ್ತಿದ್ದಾರೆ.
ಒಂದು ವೇಳೆ ಟಿಎಸ್ ಸಿಂಗ್ ದಿಯೋ ಅವರಿಗೆ ಅಧಿಕಾರ ಹಸ್ತಾಂತರವಾಗದಿದ್ದರೆ ಅವರು ಸರ್ಕಾರವನ್ನು ಮಾತ್ರವಲ್ಲ, ಕಾಂಗ್ರೆಸ್ ಪಕ್ಷವನ್ನೇ ತೊರೆಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.