ದ್ವಾರಕ ಫ್ಲೈ ಓವರ್ ಗೆ ಸಾರ್ವಜನಿಕ ಸಮಾಲೋಚನೆ ಅಗತ್ಯವಿಲ್ಲ : ಸುಪ್ರೀಮ್ ಕೋರ್ಟ್ ಇಂಗಿತ

Prasthutha|

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ದ್ವಾರಕಾ ಎಕ್ಸ್ ಪ್ರೆಕ್ಸ್ ಫ್ಲೈ ಓವರ್ ನಿರ್ಮಾಣಕ್ಕೆ ಯಾವುದೇ ಸಾರ್ವಜನಿಕ ಸಮಾಲೋಚನೆ ಅಥವಾ ಪರಿಸರ ಇಲಾಖೆಯ ಅನುಮತಿ ಅಗತ್ಯವಿಲ್ಲವೆಂದು ಮಂಗಳವಾರ ಸುಪ್ರೀಮ್ ಕೋರ್ಟ್ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೌಸಿಂಗ್ ಸೊಸೈಟಿ ಸಂಘ ಮತ್ತು ದ್ವಾರಕ ನಿವಾಸಿಗಳು ಸಾರ್ವಜನಿಕ ಸಮಾಲೋಚನೆ ಅಥವಾ ಪರಿಸರ ಇಲಾಖೆಯ ಅನುಮತಿ ಕೋರಿಲ್ಲವೆಂದು ದೂರಿ ಸುಪ್ರೀಮ್ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ನಿರ್ಮಾಣ ಚಟುವಟಿಕೆಯನ್ನು ತಡೆಹಿಡಿಯಲು ಕೋರಿ ಸ್ಥಳೀಯ ನಿವಾಸಿಗಳ ಮನವಿಯ ಕುರಿತು ಸುಪ್ರೀಮ್ ಕೋರ್ಟ್ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರತಿಕ್ರಿಯೆ ಕೇಳಿತ್ತು.

- Advertisement -

ಅರ್ಜಿದಾರದ ಪರ ವಾದಿಸಿದ ಅಡ್ವಕೇಟ್ ಪ್ರಶಾಂತ್ ಭೂಷಣ್, ಹೆದ್ದಾರಿ ಪ್ರಾಧಿಕಾರ ಯಾವುದೇ ಸಾರ್ವಜನಿಕ ಸಮಾಲೋಚನೆ, ಪರಿಸರ ಇಲಾಖೆಯ ಅನುಮತಿಯನ್ನು ಪಡೆದಿಲ್ಲವೆಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ಮಾತ್ರವಲ್ಲದೆ ಹೆದ್ದಾರಿ ನಿರ್ಮಾಣದ ನೆಪದಲ್ಲಿ ಪ್ರಾಧಿಕಾರ ಅನೇಕ ಮರಗಳನ್ನು ಕಡಿಯುತ್ತಿದೆ ಎಂದು ದೂರಿನಲ್ಲಿ ವಾದಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಪ್ರಾಧಿಕಾರ ಮತ್ತು ಇತರ ಸಂಬಂಧಪಟ್ಟ ಇಲಾಖೆಗೆ ಮುಂದಿನ ಶುಕ್ರವಾರದೊಳಗೆ ಉತ್ತರಿಸುವಂತೆ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

- Advertisement -