ಬಿಜೆಪಿಯನ್ನು ಸೋಲಿಸುವ ಯಾವ ಪಕ್ಷಕ್ಕೂ ಪ್ರಚಾರ ಮಾಡಲು ಸಿದ್ಧ: ಡಾ. ಕಫೀಲ್‌ ಖಾನ್‌

Prasthutha|

- Advertisement -

ಜೈಪುರ: ಉತ್ತರ ಪ್ರದೇಶದ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ವಜಾಗೊಂಡ ಮಕ್ಕಳ ವೈದ್ಯ ಕಫೀಲ್ ಖಾನ್, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡಲು ಸಿದ್ಧ ಎಂದು ಗುರುವಾರ ಹೇಳಿದ್ದಾರೆ.

2017 ರಲ್ಲಿ ಆಸ್ಪತ್ರೆಯಲ್ಲಿ ನಡೆದಿದ್ದ ದುರಂತದ ಬಗ್ಗೆ ತಮ್ಮ ಪುಸ್ತಕವನ್ನು ಬಿಡುಗಡೆ ಮಾಡಲು ಆಗಮಿಸಿದ್ದ ಖಾನ್, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ‘ಗೋರಖ್‌ಪುರ ಆಸ್ಪತ್ರೆ ದುರಂತ: ಎ ಡಾಕ್ಟರ್ಸ್ ಮೆಮೊಯಿರ್ ಆಫ್ ಎ ಡೆಡ್ಲಿ ಮೆಡಿಕಲ್ ಕ್ರೈಸಿಸ್’ ಎಂಬುವುದು ಅವರ ಪುಸ್ತಕದ ಶೀರ್ಷಿಕೆಯಾಗಿದೆ.ಖಾನ್ ಪ್ರಕಾರ, ಪುಸ್ತಕವು 2017ರ ದುರಂತದ ಕುರಿತು ವಿವರಿಸುತ್ತದೆ ಮತ್ತು ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರ ಹೇಳಿಕೆಗಳನ್ನೂ ಒಳಗೊಂಡಿದೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, “ನಾನು (ಉತ್ತರ ಪ್ರದೇಶ ವಿಧಾನಸಭೆ) ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗುವುದಿಲ್ಲ, ಆದರೆ (ಉತ್ತರ ಪ್ರದೇಶ ಮುಖ್ಯಮಂತ್ರಿ) ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಯನ್ನು ಸೋಲಿಸುವ ಯಾವುದೇ ರಾಜಕೀಯ ಪಕ್ಷಕ್ಕಾಗಿ ನಾನು ಪ್ರಚಾರ ಮಾಡುತ್ತೇನೆ” ಎಂದು ಹೇಳಿದರು. “ನನ್ನ ಎರಡನೇ ಅಮಾನತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹೊರತಾಗಿಯೂ ನನ್ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಚುನಾವಣೆಗೆ ಮುಂಚಿತವಾಗಿ ನನ್ನನ್ನು ವಜಾ ಮಾಡುವ ಮೂಲಕ ಆದಿತ್ಯನಾಥ್ ಅವರೇ ಸಮಸ್ಯೆಯನ್ನು ಸೃಷ್ಟಿಸಲು ಬಯಸಿದ್ದಾರೆ. “ಆದಿತ್ಯನಾಥ್ ಮುಖ್ಯಮಂತ್ರಿಯಾಗಲು ಯೋಗ್ಯರಲ್ಲ” ಎಂದು ಅವರು ಹೇಳಿದರು.

Join Whatsapp