ಪ್ರತಿ ದಿನ ಕನ್ನಡ ಪತ್ರಿಕೆ, ತಿಂಗಳಿಗೊಂದು ಕನ್ನಡ ಪುಸ್ತಕ ಓದುವ ಮೂಲಕ ಭಾಷೆ ಬೆಳೆಸಿ: ಸುನೀಲ್ ಕುಮಾರ್

Prasthutha|

ಬೆಂಗಳೂರು: ಪ್ರತಿದಿನ ಕನ್ನಡ ಪತ್ರಿಕೆ ಓದುವ ಹಾಗೂ ತಿಂಗಳಿಗೊಂದು ಕನ್ನಡ ಪುಸ್ತಕ ಕೊಳ್ಳುವ, ಎರಡು ತಿಂಗಳಿಗೊಂದು ಕನ್ನಡ ಚಲನಚಿತ್ರ ನೋಡುವ ಅಭ್ಯಾಸದ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕಾಪಾಡಲು ಜನತೆ ಸಂಕಲ್ಪ ಮಾಡುವಂತೆ ಕನ್ನಡ ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಕರೆ ನೀಡಿದ್ದಾರೆ.

- Advertisement -


ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಭಾರತಾಂಬೆ ಹಾಗೂ ಕನ್ನಡಾಂಬೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇಲಾಖೆ ಸಚಿವರಾಗಿ ಕಾರ್ಯಾರಂಭ ಮಾಡಿದರು. ಇಂಧನ ಇಲಾಖೆಯಲ್ಲಿ ಸಂಸ್ಕೃತಿ ತರುವ, ಸಂಸ್ಕೃತಿ ಇಲಾಖೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ, ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಅವರು ಹೇಳಿದರು.
ಎರಡು ಇಲಾಖೆಗಳ ಆಡಳಿತ ಸುಧಾರಣೆಗೆ ಮತ್ತು ಕಾರ್ಯಕ್ರಮಗಳ ಸಮರ್ಥ ಅನುಷ್ಠಾನಕ್ಕೆ ಬೇಕಾಗುವ ಎಲ್ಲಾ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುವುದಾಗಿ ತಿಳಿಸಿದರು.


ಇದೇ ಸಂದರ್ಭದಲ್ಲಿ 2019 ಮತ್ತು 20 ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದಶ್ರೀ ಪ್ರಶಸ್ತಿ ಗೆ ಆಯ್ಕೆ ಆದ ಭೀಮವ್ವ ದೊಡ್ಡ ಬಾಳವ್ವ ಶಿಳ್ಳೆಕ್ಯಾತರ, ಹಾಗೂ ಬಿ ವಿ ಕಾರಂತ ಪ್ರಶಸ್ತಿಗೆ ಆಯ್ಕೆ ಆದ ಎಚ್.ವಿ.ವೆಂಕಟಸುಬ್ಬಯ್ಯ ಅವರಿಗೆ ಕಲಾಕ್ಷೇತ್ರದ ಮುಂಭಾಗದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಿದರು.

- Advertisement -


ಆ ನಂತರ ಕಲಾಕ್ಷೇತ್ರದ ಆವರಣದಲ್ಲಿ ಇರುವ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಮಾರಾಟ ಮಳಿಗೆಗೆ ಭೇಟಿ ಕೊಟ್ಟು ಕನಕಾವಲೋಕನ, ಪುಸ್ತಕ ಹಾಗೂ ಡಿ ವಿ ಜಿ ಅವರ ನೆನಪಿನ ಚಿತ್ರಗಳು ಮತ್ತು ಶಿವರಾಮ ಕಾರಂತರ ನಾಟಕಗಳು ಎಂಬ ಮೂರು ಪುಸ್ತಕಗಳನ್ನು ಸಚಿವರು ಹಣಕೊಟ್ಟು ಖರೀದಿ ಮಾಡಿದರು.


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾಕ್ಟರ್ ಎಂ ಎನ್ ನಂದೀಶ್ ಹಂಚೆ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಸಂತಕುಮಾರ್ ಬಿವಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತ ಕೃಷ್ಣಶರ್ಮ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹಿಂದ್ರ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ನಾಟಕಕಾರ ಬಿ ವಿ ರಾಜಾರಾಮ್ , ಕಲಾನಿರ್ದೇಶಕ ಶಶಿಧರ್ ಅಡಪ, ಕಲಾವಿದೆ ಮಾಳವಿಕಾ ಅವಿನಾಶ್, ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಕನಕ ಅಧ್ಯಯನ ಪೀಠದ ಸುಮ್ಮನೆ ಸಮನ್ವಯಾಧಿಕಾರಿ ಎಂ ಆರ್. ಸತ್ಯನಾರಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೇ. ರವಿಶಂಕರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್ ರಂಗಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

Join Whatsapp