ಸಸ್ಯಾಹಾರಿಗಳು ಜಗತ್ತಿನಲ್ಲೇ ಅತ್ಯಂತ ಕ್ರೂರಿಗಳು: ಪತ್ರಕರ್ತ ಅಗ್ನಿ ಶ್ರೀಧರ್

Prasthutha|

► ‘ರಾಷ್ಟ್ರೀಯ ದ್ರಾವಿಡ ಸಂಘ’ಕ್ಕೆ ಬೆಂಗಳೂರಿನಲ್ಲಿ ಅಧಿಕೃತ ಚಾಲನೆ

- Advertisement -

ಬೆಂಗಳೂರು: ಸಸ್ಯಾಹಾರಿಗಳು ಜಗತ್ತಿನಲ್ಲೇ ಅತ್ಯಂತ ಕ್ರೂರಿ ಮತ್ತು ಮನುಷ್ಯತ್ವ ಇಲ್ಲದವರು ಎಂದು ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಹೇಳಿದ್ದಾರೆ.

ಆರೆಸ್ಸೆಸ್ ಗೆ ಸಡ್ಡು ಹೊಡೆದು ರಾಷ್ಟ್ರೀಯ ದ್ರಾವಿಡ ಸಂಘ(ಆರ್‌ಡಿಎಸ್) ಸ್ಥಾಪನೆಯಾಗಿದ್ದು, ಇಂದು ಬೆಂಗಳೂರಿನಲ್ಲಿ ಅಧಿಕೃತ ಚಾಲನೆ ದೊರೆತಿದೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಗ್ನಿ ಶ್ರೀಧರ್, ಮಾಂಸ ನೇತು ಹಾಕುವುದು ನಿಲ್ಲಲಿ ಎಂದು ಇತ್ತೀಚೆಗೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದರು. ಅವರ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ಲಕ್ಷಾಂತರ ಮಂದಿಯ ನರಮೇಧ ಮಾಡಿದ ಹಿಟ್ಲರ್ ಸಹ ಸಸ್ಯಹಾರಿಯಾಗಿದ್ದಾನೆ. ಇನ್ನೂ, ಭಾರತದ ಅತೀ ಕ್ರೂರಿ ಎಂದೇ ಹೇಳಲಾಗುವ ರಾಮನ್ ರಾಘವ್ ಸಹ ಸಸ್ಯಹಾರಿ ಎಂದು ಹೇಳಿದ್ದಾರೆ.

- Advertisement -

ದ್ರಾವಿಡ ಸಂಘ ಹುಟ್ಟುಹಾಕಲು ಕಾರಣ ದ್ರಾವಿಡ ತತ್ವ ಸಿದ್ದಾಂತವಾಗಿದೆ. ಈ ಸಿದ್ದಾಂತದಲ್ಲಿ ಮೇಲು-ಕೀಳುಗಳೆಂಬ ಭೇದಭಾವಗಳಿಲ್ಲ. ಎಲ್ಲರೂ ಸಮಾನರಾಗಿ ಬದುಕಬೇಕು ಎಂದು ಅವರು ಹೇಳಿದರು.  

ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಈಗ ಭಾರತದಲ್ಲಿ ಹಿಂದುತ್ವದ ಹೆಸರಿನಲ್ಲಿ ದುರಂತಗಳು ನಡೆಯುತ್ತಿದೆ. ಇದರ ವಿರುದ್ಧ ಮಾತನಾಡಿದವರನ್ನು ಭಯೋತ್ಪದಕರು ಎಂದು ಕರೆಯಲಾಗುತ್ತದೆ. ನಮ್ಮ ಹೋರಾಟವನ್ನು ಭಯೋತ್ಪಾದನೆ ಎಂದು ಬಿಂಬಿಸಿದರೂ ಒಂದು ಹೆಜ್ಜೆ ಹಿಂದೆ ಇಡಬಾರದು ಎಂದರು.

ನಂತರ ಮಾತನಾಡಿದ ಚಿಂತಕ ಮುಕುಂದ್ ರಾಜ್, ಈಗ ಭಾರತದಲ್ಲಿ ಮುಸ್ಲಿಮರ ವಿಷಯವನ್ನೇ ಪದೇ ಪದೇ ಪ್ರಸ್ತಾಪಿಸಿ, ಗೋಡ್ಸೆ ಸಂತತಿಗಳನ್ನು ಖುಷಿಪಡಿಸಲಾಗುತ್ತಿದೆ. ದ್ರಾವಿಡ ಪರಿಕಲ್ಪನೆ ಜನರಿಗೆ ತಲುಪದಂತೆ ನೋಡಿಕೊಳ್ಳಲಾಗುತ್ತಿದೆ. ಇಂತಹ ವಿಷಯಗಳು ಬಂದಾಗ ನಾವು ಎಚ್ಚರಗೊಂಡು ವೈಜ್ಞಾನಿಕವಾಗಿ ಉತ್ತರಗಳನ್ನು ನೀಡಬೇಕಾಗಿದೆ ಎಂದು ಹೇಳಿದರು.

ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ ಹನಕೆರೆ ಮಾತನಾಡಿ, ಇತ್ತೀಚಿಗೆ ಮಂಡ್ಯಕ್ಕೆ ಆಗಮಿಸಿದ್ದ ಗೃಹ ಸಚಿವ ಅಮಿತ್ ಶಾ ಅವರು ನಂದಿನಿ ಸಂಸ್ಥೆಯನ್ನು ಅಮುಲ್ ಜತೆ ವಿಲೀನ ಮಾಡುವ ಕುರಿತು ಉಲ್ಲೇಖಿಸಿದ್ದಾಗ ನಾನು ಆ ವೇದಿಕೆಯಲ್ಲಿ ಇದ್ದಿದ್ದರೆ, ಗೃಹ ಸಚಿವರ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದು ಹೇಳಿದರು.

ಯುವ ಜನತೆಯನ್ನು ಜಾಗೃತಗೊಳಿಸಲು ಎಲ್ಲ ರೀತಿಯ ಪ್ರಭುತ್ವವನ್ನು ಒಂದೆಡೆ ತರಲು ಸಂಘ ಆರಂಭವಾಗಿರುವುದು ಸ್ವಾಗತಿಸುತ್ತೇನೆ ಎಂದು ದಲಿತ, ಮೈನಾರಿಟಿಸ್ ಸೇನೆಯ ಅಧ್ಯಕ್ಷ ಎ.ಜೆ.ಖಾನ್ ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್,  ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ.ಪಾಟೀಲ್, ಕ್ರಿಕೆಟ್ ಪಟು ವೇದಾ ಕೃಷ್ಣಮೂರ್ತಿ, ಚಿತ್ರ ಸಾಹಿತಿ ಕವಿರಾಜ್, ಚಿಂತಕಿ ರೇಣುಕಾ ಸೇರಿದಂತೆ ಪ್ರಮುಖರಿದ್ದರು.

Join Whatsapp