ಅಬುಧಾಬಿ; ಐಪಿಎಲ್ 14ನೇ ಸೀಸನ್ ನ 52ನೇ ಪಂದ್ಯದಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ.
ಬುಧವಾರ ಸಂಜೆ ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡವು ಗೆಲುವು ಸಾಧಿಸಿದರೆ ಐಪಿಎಲ್ ನಲ್ಲಿ ದಾಖಲೆಯೊಂದು ನಿರ್ಮಾಣವಾಗಲಿದೆ. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ಹೈದರಾಬಾದ್ ವಿರುದ್ಧ ಆರ್ ಸಿಬಿ ಗೆಲುವು ದಾಖಲಿಸಿದರೆ ಐಪಿಎಲ್ ಟೂರ್ನಿಯಲ್ಲಿ 100 ಗೆಲುವು ದಾಖಲಿಸಿದ ತಂಡಗಳ ಪಟ್ಟಿಗೆ ಆರ್ ಸಿಬಿ ಸೇರ್ಪಡೆಯಾಗಲಿದೆ.
ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮಾತ್ರ ಐಪಿಎಲ್ ನಲ್ಲಿ ಈ ಸಾಧನೆ ಮಾಡಿವೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 216 ಪಂದ್ಯಗಳಿಂದ ಒಟ್ಟು 126 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎಂಎಸ್ ಧೋನಿ ಕ್ಯಾಪ್ಟನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ 192 ಪಂದ್ಯಗಳಲ್ಲಿ 115 ಗೆಲುವಿನೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ 205 ಪಂದ್ಯಗಳಲ್ಲಿ 105 ಪಂದ್ಯಗಳನ್ನು ಗೆದ್ದಿದ್ದು, ಈ ಮೂಲಕ ಮೂರನೇ ಸ್ಥಾನದಲ್ಲಿದೆ.
ಯುಎಇನಲ್ಲಿ ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿರುವ ಆರ್ಸಿಬಿ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 12 ಪಂದ್ಯಗಳಿಂದ 16 ಅಂಕ ಗಳಿಸಿರುವ ವಿರಾಟ್ ಕೊಹ್ಲಿ ಬಳಗವು ಇನ್ನುಳಿದಿರುವ ಎರಡೂ ಪಂದ್ಯಗಳಲ್ಲಿ ಗೆದ್ದರೆ 20 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ತಲಾ 13 ಪಂದ್ಯಗಳನ್ನಾಡಿರುವ ಡೆಲ್ಲಿ 20 ಮತ್ತು ಚೆನ್ನೈ ಸೂಪರ್ ಕಿಂಗ್ಸ್ 18 ಅಂಕಗಳೊಂದಿಗೆ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ಆರ್ಸಿಬಿಯು ಶುಕ್ರವಾರ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿಯನ್ನು ಎದುರಿಸಲಿದೆ.
ಮತ್ತೊಂದೆಡೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ಮುಂದುವರಿಸಿರುವ ಅನ್ ರೈಸರ್ಸ್ ಹೈದರಾಬಾದ್ ತಂಡವು ಆಡಿರುವ 12 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಜಯಿಸಿದ್ದು 4 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಆರ್’ಸಿಬಿ ತಂಡದ ಬ್ಯಾಟಿಂಗ್ನಲ್ಲಿ ಕೊಹ್ಲಿ, ಪಡಿಕ್ಕಲ್, ಮ್ಯಾಕ್ಸ್ ವೆಲ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸ್ಪಿನ್ನರ್’ಗಳಾದ ಯಜುವೇಂದ್ರ ಚಾಹಲ್ ಶಾಬಾಜ್ ನದೀಮ್ ಅಮೋಘ ಲಯದಲ್ಲಿದ್ದಾರೆ.
ತಂಡಗಳು: ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಎಬಿ ಡಿವಿಲಿಯರ್ಸ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್ವೆಲ್, ಹರ್ಷಲ್ ಪಟೇಲ್, ಡೇನಿಯಲ್ ಕ್ರಿಸ್ಟಿಯನ್, ಕೈಲ್ ಜೆಮಿಸನ್, ಶಾಬಾಜ್ ಅಹಮದ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ಪವನ್ ದೇಶಪಾಂಡೆ, ಸಚಿನ್ ಬೇಬಿ.
ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಜಾನಿ ಬೆಸ್ಟೊ, ಪ್ರಿಯಂ ಗರ್ಗ್, ವೃದ್ಧಿಮಾನ್ ಸಹಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ಕೇದಾರ್ ಜಾಧವ್, ಮೊಹಮ್ಮದ್ ನಬಿ, ವಿಜಯಶಂಕರ್, ಭುವನೇಶ್ವರ್ ಕುಮಾರ್, ಜೆ. ಸುಚಿತ್, ಜೇಸನ್ ರಾಯ್, ರಶೀದ್ ಖಾನ್, ಸಂದೀಪ್ ಶರ್ಮಾ, ಡೇವಿಡ್ ವಾರ್ನರ್, ಮನೀಷ್ ಪಾಂಡೆ