ಮುಂದಿನ ಜನವರಿಯಿಂದ ATM ಗಳಿಂದ ವಿತ್ ಡ್ರಾ ಮಾಡುವ ಪ್ರಕ್ರಿಯೆಯು ಮತ್ತಷ್ಟು ದುಬಾರಿಯಾಗಲಿದೆ. ನಿಗದಿತ ಮಿತಿಗಿಂತ ಹೆಚ್ಚು ಬಾರಿ ATM ನಿಂದ ಹಣ ಪಡೆಯುವವರು ಹೆಚ್ಚಿನ ಶುಲ್ಕ ನೀಡಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕುರಿತು ಈಗಾಗಲೇ ಅಧಿಸೂಚನೆ ಹೊರಡಿಸಿದೆ ಎಂದು moneycontrol.com ವರದಿ ಮಾಡಿದೆ.
ತಮ್ಮ ಖಾತೆಯಿರುವ ಬ್ಯಾಂಕಿನ ಎಟಿಎಂಗಳಿಂದ ವಿದ್‍ಡ್ರಾ ಮಾಡುವ ಗ್ರಾಹಕರು ನಿಗದಿತ ಮಿತಿ ದಾಟಿದ ಬಳಿಕ ಪ್ರತಿ ವಿದ್‍ಡ್ರಾಗಳಿಗೆ 21 ರೂಪಾಯಿಯನ್ನು ಹೆಚ್ಚುವರಿ ಪಾವತಿಸಬೇಕಾಗಿದೆ. ಡೆಬಿಟ್ ಕಾರ್ಡ್ ಬಳಕೆದಾರರು ಪ್ರತಿ ತಿಂಗಳು ಐದು ಬಾರಿ ಉಚಿತವಾಗಿ ತಮ್ಮ ಬ್ಯಾಂಕಿನ ಎಟಿಎಂ ನಿಂದ ಹಣ ಪಡೆಯಬಹುದಾಗಿದೆ. ಆ ಬಳಿಕ ಪ್ರತಿ ಬಳಕೆಗೆ 21 ರೂ. ಪಾವತಿಸಬೇಕಾಗುತ್ತದೆ.
ಮೆಟ್ರೋ ನಗರಗಳಲ್ಲಿ ಇತರೆ ಬ್ಯಾಂಕುಗಳಿಂದ ವಿದ್‍ಡ್ರಾ ಮಾಡುವ ಮಿತಿ ಕೇವಲ ಮೂರು ಬಾರಿಯಾಗಿದೆ. ಇತರೆ ನಗರಗಳಲ್ಲಿ ಅದರ ಮಿತಿ ಐದು ಬಾರಿಯಾಗಿದೆ. ನಿಗದಿತ ಮಿತಿಗಿಂತ ಎಟಿಎಂ ಬಳಕೆಗೆ ಇರುವ 21 ರೂಪಾಯಿಗಳಿಗೆ ತೆರಿಗೆ ಕೂಡಾ ವಿಧಿಸಲಾಗುತ್ತದೆ ಎನ್ನಲಾಗಿದೆ. ಮುಂಚೂಣಿಯ ಬ್ಯಾಂಕುಗಳು ಈಗಾಗಲೇ ತಮ್ಮ ಗ್ರಾಹಕರಿಗೆ ಈ ಕುರಿತು ಮಾಹಿತಿ ರವಾನಿಸಲಾಗಿದೆ ಎಂದು ಹೇಳಿವೆ. ಹಲವು ಬೆಲೆಯೇರಿಕೆಯ ಬಿಸಿಯಿಂದ ನರಳುತ್ತಿರುವ ಸಾರ್ವಜನಿಕರಿಗೆ ಇದೀಗ ಈ ಹೆಚ್ಚುವರಿ ಎಟಿಎಂ ದರವು ಗಾಯದ ಮೇಲೆ ಬರೆ ಎಳೆದಂತಾಗಿದೆ.