ಬೆಂಗಳೂರು: ಅಪ್ರಾಪ್ತ ಮುಸ್ಲಿಂ ಬಾಲಕಿಯ ಮೇಲೆ ದೇವಸ್ಥಾನ ಅರ್ಚಕನಿಂದ ಅತ್ಯಾಚಾರ

Prasthutha|

ಬೆಂಗಳೂರು: ಅರ್ಚಕನೋರ್ವ 10ರ ಹರೆಯದ ಅಪ್ರಾಪ್ತ ಮುಸ್ಲಿಂ ಬಾಲಕಿಯ ಮೇಲೆ ದೇವಸ್ಥಾನದ ಆವರಣದಲ್ಲಿ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿ ನಡೆದಿದೆ.

ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ತನ್ನ ಪತಿಯೊಂದಿಗೆ ನೆಲೆಸುತ್ತಿದ್ದ ಪುತ್ರಿಯನ್ನು ಭೇಟಿಯಾಗುವುದಕ್ಕಾಗಿ ಅರ್ಚಕ ವೆಂಕಟರಮಣಪ್ಪ ಬರುತ್ತಿದ್ದ. ಆತ ಚಿಕ್ಕಬಳ್ಳಾಪುರದಲ್ಲಿ ತನ್ನ ಪತ್ನಿಯೊಂದಿಗೆ ನೆಲೆಸುತ್ತಿದ್ದ. ಆತನ ಇಬ್ಬರು ಪುತ್ರಿಯರನ್ನು ದೇವಸ್ಥಾನದ ಅರ್ಚಕರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಓರ್ವಾಕೆ ದೇವನಹಳ್ಳಿಯಲ್ಲಿ ನೆಲೆಸುತ್ತಿದ್ದರೆ, ಇನ್ನೋರ್ವೆ ಯಲಹಂಕದಲ್ಲಿ ನೆಲೆಸುತ್ತಿದ್ದಳು.

- Advertisement -

ಚೌಡೇಶ್ವರಿ ದೇವಸ್ಥಾನದ ಅರ್ಚಕನಾಗಿದ್ದ ಆತನ ಅಳಿಯ ನಗರದಿಂದ ಹೊರ ಹೋಗಿದ್ದ ಮತ್ತು ನಿತ್ಯದ ಆಚರಣೆಗಳನ್ನು ಮಾಡುವ ಜವಾಬ್ದಾರಿಯನ್ನು ವೆಂಕಟರಮಣಪ್ಪರಿಗೆ ವಹಿಸಲಾಗಿತ್ತು.

ಮಂಗಳವಾರ ಸಂಜೆ 4.30ರ ವೇಳೆಗೆ ವೆಂಕಟರಮಣಪ್ಪ ತನ್ನ ಮನೆಯ ಬಳಿ ಬಾಲಕಿ ಆಟವಾಡುತ್ತಿರುವುದನ್ನು ಕಂಡಿದ್ದಾನೆ. ಹುಡುಗಿಯ ಕುಟುಂಬವು ಸಮೀಪದಲ್ಲೇ ವಾಸಿಸುತ್ತಿದ್ದು, ಆಕೆಯ ತಂದೆ ಗುಜರಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಸಿಹಿತಿಂಡಿ ನೀಡುವುದಾಗಿ ಆಕೆಯನ್ನು ಮನೆಯೊಳಗೆ ಕರೆದುಕೊಂಡು ಹೋದ ವೆಂಕಟರಮಣಪ್ಪ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಉಪ್ ಆಯುಕ್ತ (ಈಶಾನ್ಯ) ಸಿ.ಕೆ.ಬಾಬಾ ತಿಳಿಸಿದ್ದಾರೆ.

ಬಾಲಕಿಯನ್ನು ಕಾಣದಾದಾಗ ಆತಂಕಗೊಂಡ ಬಾಲಕಿಯ ಕುಟುಂಬ ಆಕೆಯನ್ನು ಹುಡುಕುವುದಕ್ಕೆ ಪ್ರಾರಂಭಿಸಿತು. ದೇವಸ್ಥಾನದ ಹೊರಗೆ ಹೂ ಮಾರುವ ಮಹಿಳೆಯೋರ್ವಳು ಆಕೆಯನ್ನು ಅರ್ಚಕರ ಮನೆಯೊಳಗೆ ಹೋಗುವುದನ್ನು ತಾನು ಕಂಡಿರುವುದಾಗಿ ಹೇಳಿದ್ದಳು. ಹುಡುಗಿಯ ಕುಟುಂಬ ಅರ್ಚಕನ ಮನೆಯ ಕಡೆಗೆ ಹೋದಾಗ ಹುಡುಗಿ ಅಳುತ್ತಾ ಮನೆಯಿಂದ ಹೊರಬಂದಿದ್ದಳು. ಆಕೆ ಘಟನೆಯನ್ನು ವಿವರಿಸಿದ್ದು, ಕೂಡಲೇ ಸ್ಥಳದಲ್ಲಿ ಜನರು ಜಮಾಯಿಸತೊಡಗಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ಹುಡುಗಿಯನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಎಂದು ಬಾಬಾ ತಿಳಿಸಿದ್ದಾರೆ.

ಸಿಸಿ ಟಿವಿ ವೀಡಿಯೊ ಮತ್ತು ಹೂ ಮಾರುವ ಮಹಿಳೆಯ ಹೇಳಿಕೆಯ ಪ್ರಕಾರ ಪೊಲೀಸರು ವೆಂಕಟರಮಣಪ್ಪನನ್ನು ವಿಚಾರಣೆಗಾಗಿ ಕೊಂಡೊಯ್ದಿದ್ದಾರೆ. ಈ ಸಂದರ್ಭದಲ್ಲಿ ಆತ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆತನ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಸ್ಕೊ)ಯಡಿ ಪ್ರಕರಣ ದಾಖಲಿಸಲಾಗಿದೆ.

- Advertisement -