ಉತ್ತರ ಪ್ರದೇಶ | ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕತ್ತು ಹಿಸುಕಿ ಕೊಲೆ

Prasthutha: June 22, 2021

ಲಕ್ನೋ : ರೇಪ್ ಕ್ಯಾಪಿಟಲ್ ಸಿಟಿ ಎಂದೇ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು,  ಎಂಟು ವರ್ಷದ ಬಾಲಕಿಯ ಮೃತದೇಹವು ಕತ್ತು ಹಿಸುಕಿದ ರೀತಿಯಲ್ಲಿ ಕಬ್ಬಿನ ಗದ್ದೆಯೊಂದರಲ್ಲಿ ಪತ್ತೆಯಾಗಿದ್ದು, ಪೊಲೀಸರು ಅತ್ಯಾಚಾರ ಶಂಕೆ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಲಕ್ನೋದಿಂದ 130 ಕಿ.ಮೀ ದೂರದಲ್ಲಿರುವ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ನಾಪತ್ತೆಯಾಗಿ ಕೆಲವು ಗಂಟೆಗಳ ಬಳಿಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯ ಮೈಮೇಲಿನ ಗಾಯಗಳ ಆಧಾರದಲ್ಲಿ ಪೊಲೀಸರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.

ಅವಳು ಧರಿಸಿದ್ದ ಬಟ್ಟೆಗಳಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ.

ಗ್ರಾಮಸ್ಥರ ಹೇಳಿಕೆಗಳ ಪ್ರಕಾರ ಬಾಲಕಿ ತಮ್ಮ ಹೊಲದಲ್ಲಿ ಆಡುಗಳನ್ನು ಮೇಯಿಸಲು ಅಜ್ಜಿ ಜೊತೆ ಭಾನುವಾರ ಬೆಳಿಗ್ಗೆ ಮನೆಯಿಂದ ಹೋಗಿದ್ದಳು. ಮಧ್ಯಾಹ್ನದ ಹೊತ್ತಿಗೆ ಹೊಲದಿಂದ ಅವಳು ಮನೆಗೆಂದು ಮರಳಿದ್ದಾಳೆ. ಆದರೆ ಸಂಜೆಯಾದರೂ ಬಾಲಕಿ ಮನೆಗೆ ಹಿಂತಿರುಗದಿದ್ದಾಗ, ಕುಟುಂಬವು ಅವಳನ್ನು ಹುಡುಕಲು ಪ್ರಾರಂಭಿಸಿತ್ತು.

“ನಾನು ದಣಿದಿದ್ದೇನೆ, ಮನೆಗೆ ಹೋಗಬೇಕು ಎಂದು ಹುಡುಗಿ ಹೇಳಿದ್ದಳು. ಹಾಗಾಗಿ ನಾನು ‘ನೀನು ಮನೆಗೆ ಹೋಗು ನಾನು ಆಡುಗಳನ್ನು ಮೇಯಿಸುತ್ತೇನೆ’ ಎಂದು ಹೇಳಿದೆ. ನಾನು ಆಡುಗಳೊಂದಿಗೆ ಸಂಜೆ ಮನೆಗೆ ಬಂದೆ. ಆಗ ಅವಳು ಮನೆಗೆ ತಲುಪಿಲ್ಲ ಎಂದು ತಿಳಿಯಿತು. ಸ್ಥಳೀಯ ವಿವಾಹಕ್ಕೆ ಸಮಾರಂಭದ ಕಡೆ ಹೋಗಿರಬಹುದು ಎಂದು ಭಾವಿಸಿದೆವು. ಆದರೆ ಅವಳು ಅಲ್ಲಿ ಕೂಡ ಇರಲಿಲ್ಲ. ನಂತರ ಹುಡುಕಾಟ ನಡೆಸಿದಾಗ ಆಕೆಯ ದೇಹವು ಪತ್ತೆಯಾಗಿದೆ. ಅವಳ ಕಾಲುಗಳನ್ನು ಕಟ್ಟಲಾಗಿತ್ತು ಮತ್ತು ಎಲ್ಲೆಡೆಯೂ ಸಾಕಷ್ಟು ರಕ್ತ ಇತ್ತು “ಎಂದು ಹುಡುಗಿಯ ಅಜ್ಜಿ ಸುದ್ದಿಗಾರರಿಗೆ ತಿಳಿಸಿದರು.

ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ