ತೆರಿಗೆ ಹೆಸರಲ್ಲಿ ಪಾಲಿಕೆ ಅಧಿಕಾರಿಗಳಿಂದ ಮೀಟರ್ ಬಡ್ಡಿ ದಂಧೆ: ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ‘ಬೆಂಗಳೂರು ನಗರದಲ್ಲಿ 20 ಲಕ್ಷ ಆಸ್ತಿಗಳಿದ್ದು, ಅದರಲ್ಲಿ 18 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ ಪಾಲಿಕೆ ತಮ್ಮ ಅಧಿಕಾರಿಗಳ ತಪ್ಪಿನಿಂದ ಆಗಿರುವ ಅಚಾತುರ್ಯಕ್ಕೆ 78 ಸಾವಿರ ಆಸ್ತಿಗಳ ಮಾಲೀಕರಿಗೆ ತೆರಿಗೆ ಪಾವತಿ ಮಾಡಿಲ್ಲ ಎಂದು ಎರಡರಿಂದ ಮೂರು ಪಟ್ಟು ದುಬಾರಿ ದಂಡ ವಿಧಿಸಿದೆ. ಈ ಆಸ್ತಿ ಮಾಲೀಕರಿಂದ 120 ಕೋಟಿ ರೂ. ತೆರಿಗೆ ಬಾಕಿ ಬರಬೇಕಾಗಿದ್ದು, ಅದಕ್ಕೆ 240 ಕೋಟಿ.ರೂ ಬಡ್ಡಿ ಹಾಕಿದ್ದಾರೆ. ಆ ಮೂಲಕ ಪಾಲಿಕೆ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸಲು ಮುಂದಾಗಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.

- Advertisement -

ಈ ವಿಚಾರವಾಗಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ರಾಮಲಿಂಗಾ ರೆಡ್ಡಿ ಅವರು ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಕಾಂಗ್ರೆಸ್ ಪಕ್ಷದಿಂದ ಪಾಲಿಕೆಯ ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ, ಪಿ.ಆರ್ ರಮೇಶ್, ಕೆ.ಚಂದ್ರಶೇಖರ್, ಪದ್ಮಾವತಿ, ಗಂಗಾಬಿಕೆ, ಮಂಜುನಾಥ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಬೆಂಗಳೂರು ಮಹಾನಗರ ಪಾಲಿಕೆ ಜನರ ಮೇಲೆ ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹಾಕುತ್ತಿದೆ. ಅಧಿಕಾರಿಗಳು ಐದು ವರ್ಷಗಳ ಹಿಂದೆ ವಲಯ ವಿಂಗಡಣೆಯನ್ನು ಸರಿಯಾಗಿ ಮಾಡದೇ, ಜನರಲ್ಲಿ ಗೊಂದಲ ಮೂಡಿಸಿದೆ. ಅಧಿಕಾರಿಗಳು ನಿಗದಿ ಮಾಡಿದ ವಲಯದಲ್ಲಿ ತೆರಿಗೆ ಪಾವತಿಸಿದ್ದಾರೆ. ಆದರೆ ಈಗ ಅಧಿಕಾರಿಗಳು ನೀವು ಬೇರೆ ವಲಯಕ್ಕೆ ಅನ್ವಯವಾಗುವಂತೆ ತೆರಿಗೆ ಪಾವತಿ ಮಾಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ಅಧಿಕಾರಿಗಳಿಗೆ ಆಡಳಿತ ವಿಚಾರದಲ್ಲಿ ಮೇಯರ್ ಅವರ ಅಧಿಕಾರವನ್ನು ನೀಡಿರಬಹುದು. ಆದರೆ ತೆರಿಗೆ ಹೆಚ್ಚಳ ವಿಚಾರದಲ್ಲಿ ಇದು ಮುಖ್ಯಮಂತ್ರಿಗಳ ಗಮನಕ್ಕೆ ಬರದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರ ಗಮನಕ್ಕೆ ಈ ವಿಚಾರ ಬಂದಿರುತ್ತದೆ. ಹೀಗಾಗಿ ಈ ಮೀಟರ್ ಬಡ್ಡಿ ವ್ಯವಹಾರ ದಂಧೆಗೆ ಬಿಜೆಪಿ ಸರ್ಕಾರವೇ ಕಾರಣವಾಗಿದೆ ಎಂದು ದೂರಿದರು.

- Advertisement -

ಪಾಲಿಕೆ ಮೊದಲು ಈ ಬಡ್ಡಿ ದಂಧೆಯನ್ನು ನಿಲ್ಲಿಸಬೇಕು. ಪಾಲಿಕೆ ಅಧಿಕಾರಿಗಳು 2016ರಲ್ಲಿ ಸರಿಯಾಗಿ ವಲಯ ವರ್ಗಿಕರಣ ಮಾಡಿದ್ದರೆ ಜನರು ಅದೇ ವಲಯದಲ್ಲಿ ತೆರಿಗೆ ಕಟ್ಟುತ್ತಿದ್ದರು. ಆದರೆ ಇಂದು ಯಾವುದೇ ತಪ್ಪು ಮಾಡದ ಜನರಿಗೆ ಈ ರೀತಿಯಾಗಿ ಮೂರು ಪಟ್ಟು ತೆರಿಗೆ ಕಟ್ಟುವಂತೆ ನೋಟೀಸ್ ಜಾರಿ ಮಾಡಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಅಧಿಕಾರಿಗಳು ಹಿಂಪಡೆಯಬೇಕು. ಈ ನಿರ್ಧಾರ ಹಿಂಪಡೆಯದಿದ್ದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಆಗ್ರಹಿಸಿದ್ದಾರೆ.

‘ಅಧಿಕಾರಿಗಳು ಈ ಹಿಂದೆ ಜಾರಿಯಲ್ಲಿದ್ದ ಕಾಯ್ದೆ ಆಧಾರವಾಗಿ ಜನರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಹಳೇ ಕಾಯ್ದೆಯಲ್ಲಿ ನೋಟೀಸ್ ಜಾರಿ ಮಾಡಲು ಕೇವಲ 3 ವರ್ಷಗಳ ಕಾಲಾವಕಾಶವಿದೆ. 3 ವರ್ಷಗಳ ಒಳಗಾಗಿ ಅವರು ನೋಟೀಸ್ ನೀಡಬೇಕಾಗಿತ್ತು. ಆದರೆ ನೀಡಿಲ್ಲ. ನೂತನ ಕಾಯ್ದೆಯಲ್ಲಿ ಇದನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆಯಾದರೂ, ಹಳೇಯ ಕಾಯ್ದೆ ಆಧಾರದ ಮೇಲೆ ನೋಟೀಸ್ ಅನ್ನು ನೀಡಲಾಗಿದೆ. ಪಾಲಿಕೆ ಅಧಿಕಾರಿಗಳ ಈ ನಿರ್ಧಾರ ಮಹಾ ಅಪರಾಧವಾಗಿದೆ’ ಎಂದು ಎಚ್ಚರಿಕೆ ನೀಡಿದರು.


‘ಪಾಲಿಕೆ ಅಧಿಕಾರಿಗಳು ಈ ವಿಚಾರದಲ್ಲಿ ನಾಜೂಕಾಗಿ ತೆರಿಗೆದಾರರಿಗೆ ಟೋಪಿ ಹಾಕಲು ಮುಂದಾಗಿದ್ದಾರೆ. ಬೆಂಗಳೂರಿನ ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಪ್ರಮಾದವಾಗಿದ್ದು, ತಂತ್ರಾಂಶದಲ್ಲಿ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ. ನಿಮ್ಮ ಆಡಳಿತ ವೈಫಲ್ಯದಿಂದ ಇಂತಹ ಸಮಸ್ಯೆ ಬಂದಿದ್ದು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರಿಗೆ ಶಿಕ್ಷೆ ನೀಡಲಾಗುತ್ತಿದೆ. ಈ ರೀತಿಯಾಗಿ ಕಿರುಕುಳ ನೀಡುತ್ತಿರುವ ಅದಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆರೋಪಿಸಿದರು



Join Whatsapp