ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಎಸ್.ಐ.ಟಿ ತಯಾರಿಸಿದ ಅಂತಿಮ ವರದಿ ಸಲ್ಲಿಕೆಗೆ ತಡೆ ನೀಡಿದ ಹೈಕೋರ್ಟ್

Prasthutha|

ಬೆಂಗಳೂರು: ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತಯಾರಿಸಿದ ವರದಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿ ಅದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಭಾಗಿಯಾದ ಮಹಿಳೆಗೆ ಅನಾರೋಗ್ಯದ ನಿಟ್ಟಿನಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಕೋರಿ ಸಂತ್ರಸ್ತೆ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠವು ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶಗಳನ್ನು ಮುಂದುವರಿಸಲಾಗುವುದೆಂದು ಹೇಳಿದೆ.

- Advertisement -

ಹೈಕೋರ್ಟ್ ಜುಲೈ 27 ರಂದು ಎಸ್‌ಐಟಿಗೆ ಶಾಸಕರ ವಿರುದ್ಧದ ಅತ್ಯಾಚಾರ ಆರೋಪಗಳ ತನಿಖೆಯ ಅಂತಿಮ ವರದಿ ಸಲ್ಲಿಸದಂತೆ ಮತ್ತು ಬಿಜೆಪಿ ನಾಯಕ ಮಹಿಳೆಯ ವಿರುದ್ಧ ಸುಲಿಗೆ ಆರೋಪದ ವಿರುದ್ಧ ಸಮಾನಾಂತರ ತನಿಖೆಗೆ ತಡೆಯಾಜ್ಞೆ ನೀಡಿತ್ತು. ಎಸ್‌ಐಟಿಯ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಮಹಿಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಶುಕ್ರವಾರ ನಡೆದ ವಿಚಾರಣೆಯಲ್ಲಿ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವಡಗಿ ವಾದ ಮಂಡಿಸಿದರು. ಎಸ್.ಐ.ಟಿ ತನಿಖೆಯನ್ನು ಪೂರ್ಣಗೊಳಿಸಿದರೂ ವರದಿಯನ್ನು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತಯಾರಿಸುವುದರಿಂದ ಈ ವರದಿಯನ್ನು ಸಲ್ಲಿಸಲಾಗಿಲ್ಲ. ಈ ನಿಟ್ಟಿನಲ್ಲಿ ಪ್ರತ್ಯೇಕ ಎಫ್.ಐ.ಆರ್ ಗಳ ತನಿಖೆಯನ್ನು ಬೆಂಗಳೂರು ಪೊಲೀಸ್ ಆಯುಕ್ತರಿಂದ ನಡೆಸಲಾಗುತ್ತಿದೆ ಎಂದು ರಾಜ್ಯ ಅಡ್ವೋಕೇಟ್ ಜನರಲ್ ತಿಳಿಸಿದರು.

- Advertisement -

ವಿವಾದಿತ ವೀಡಿಯೋ ದೃಶ್ಯ ಬಹಿರಂಗವಾದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 3 ರಂದು ಕರ್ನಾಟಕ ಸರ್ಕಾರದ ನೀರಾವರಿ ಮತ್ತು ಜಲ ಸಂಪನ್ಮೂಲ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಆರಂಭದಲ್ಲಿ ಇದು ನಕಲಿ ಸಿಡಿ ಎಂದು ಹೇಳಿದ ರಮೇಶ್ ನಂತರ ಎಸ್.ಐ.ಟಿ ನೀಡಿದ ತನ್ನ ಹೇಳಿಕೆಯಲ್ಲಿ ಅವರು ಬ್ಲಾಕ್ ಮೇಲ್ ಮಾಡಿ ಈ ಸಿಡಿಯನ್ನು ಮಾಡಲಾಗಿದೆ ಎಂದು ತಿಳಿಸಿದ್ದರು.



Join Whatsapp