ಅಪಘಾತದಲ್ಲಿ ಮೃತಪಟ್ಟ KSRTC ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂ. ಅಪಘಾತ ಪರಿಹಾರ ಚೆಕ್

Prasthutha|

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಕೆಎಸ್‌ಆರ್‌ಟಿಸಿ ಚಾಲನಾ ಸಿಬ್ಬಂದಿಯ ಕುಟುಂಬಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 1 ಕೋಟಿ ಅಪಘಾತ ಪರಿಹಾರದ ಚೆಕ್‌ ವಿತರಣೆ ಮಾಡಿದರು.

- Advertisement -

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಚಾಲಕರಾದ ನಾಗರಾಜು, ಚಲಪತಿ ಮೃತಪಟ್ಟಿದ್ದರು. ಇಂದು ಎರಡು ಕುಟುಂಬಕ್ಕೆ ತಲಾ 1 ಕೋಟಿ ರೂ. ಅಪಘಾತ ಪರಿಹಾರ ಚೆಕ್ ವಿತರಣೆಯನ್ನು ಕೆಎಸ್ಆರ್‌ಟಿಸಿ ನಿಗಮದ ಕೇಂದ್ರ ಕಚೇರಿಯಲ್ಲಿ ನೀಡಲಾಯಿತು.

ಈ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಮೃತಪಟ್ಟ ಚಾಲನಾ ಸಿಬ್ಬಂದಿಯನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದ್ದು, ಈ ಯೋಜನೆಯನ್ನು ಸದ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಜರುಗಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

- Advertisement -

ಕೆಎಸ್‌ಆರ್‌ಟಿಸಿ ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ಸಿಬ್ಬಂದಿಗಳಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮೆಯನ್ನು (On duty & Off Duty ಅಪಘಾತ) ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ 50 ಲಕ್ಷ ರೂ. ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ವಾರ್ಷಿಕ 885 ರೂ. ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ 50 ಲಕ್ಷ ರೂ. ವಿಮೆಯು ಒಳಗೊಂಡಿರುತ್ತದೆ.

 ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದ ಮೇಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅಪಘಾತಗಳಿಗೂ ಸಹ ಈ ವಿಮಾ ಸೌಲಭ್ಯ ಅನ್ವಯಿಸುತ್ತದೆ.

ಕುಟುಂಬದವರು ಹಣವನ್ನು‌ ಬ್ಯಾಂಕಿನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು.