ರಾಮಮಂದಿರಕ್ಕೆ ಸಿದ್ದರಾಮಯ್ಯರಿಂದಲೂ ದೇಣಿಗೆ ಸ್ವೀಕರಿಸಿದ್ದೇವೆ : ಎಸ್ ಟಿ ಸೋಮಶೇಖರ್

Prasthutha|

ಮೈಸೂರು: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ದೇಣಿಗೆ ನೀಡಿದ್ದಾರೆ. ಆದರೆ ಬಹಿರಂಗವಾಗಿ, ಸಾರ್ವಜನಿಕವಾಗಿ ಅವರು ಹೇಳಿಕೆ ನೀಡುತ್ತಿಲ್ಲ. ಸರ್ಕಾರ ಸುಗಮವಾಗಿ ಆಡಳಿತ ನಡೆಸುತ್ತಿರುವುದಕ್ಕೆ ಅವರಿಗೆ ಯಾವುದೇ ರೀತಿ ಮಾತನಾಡಲು ಆಗದಿರುವುದರಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

- Advertisement -

ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸುವ ಲಿಫ್ಟ್ ಅನ್ನು ರೈಲ್ವೇ ಇಲಾಖೆ ದೇವಸ್ಥಾನಕ್ಕೆ ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು, ಸರ್ಕಾರ ಸುಗಮವಾಗಿ, ದಕ್ಷವಾಗಿ ಆಡಳಿತ ನಡೆಸುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಲು ಏನೂ ಇಲ್ಲದಿರುವುದರಿಂದ ಸಿದ್ದರಾಮಯ್ಯ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರು ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರಿಂದಲೂ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಸಂಗ್ರಹವಾದ ಪ್ರತಿಯೊಂದು ಹಣವೂ ರಾಮ ಮಂದಿರಕ್ಕೆ ಉಪಯೋಗವಾಗಲಿದೆ ಹಾಗೂ ಎಲ್ಲಾ ಲೆಕ್ಕವನ್ನು ಇಡಲಾಗಿದೆ. ದೇಣಿಗೆ ಸಂಗ್ರಹಿಸಿದ ಮನೆಯ ಸಂಖ್ಯೆ, ಸಹಿ ಪಡೆದು, ಪ್ಯಾನ್ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ. ಜೊತೆಗೆ ರಶೀದಿಯನ್ನು ಸಹ ಕೊಡಲಾಗುತ್ತಿದೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಜನರು ಸ್ವಯಂಪ್ರೇರಿತರಾಗಿ ದೇಣಿಗೆ ಕೊಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

- Advertisement -

ವಿರೋಧ ಪಕ್ಷದವರು ಹೇಳಿದಂತೆ ರಾಮ ಮಂದಿರಕ್ಕೆ ನೀಡಿದ ದೇಣಿಗೆಯ ಹಣ ದುರುಪಯೋಗವಾಗುತ್ತಿಲ್ಲ. ಖಂಡಿತವಾಗಿಯೂ ದೇಣಿಗೆಯ ಪ್ರತಿಯೊಂದು ಲೆಕ್ಕವೂ ಸಿಗಲಿದೆ ಎಂದು ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.



Join Whatsapp