ಮಲ್ಲೇಶ್ವರಂ ನಲ್ಲಿ ಬ್ರಾಹ್ಮಣರಿಗೆ, ಸಿ.ವಿ. ರಾಮನ್ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಖಂಡನೆ

Prasthutha|

ಬೆಂಗಳೂರು, ಜೂ 2 ; ಕೋವಿಡ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟ ಮಾಡಿ ಲಾಭ ಮಾಡಿಕೊಂಡು  ಜನರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಬಿಜೆಪಿ ನಾಯಕರು, ಇದೀಗ ಕೊರೋನಾ ಲಸಿಕೆ ವಿಚಾರದಲ್ಲಿ ಜಾತಿ, ಧರ್ಮ ತರುತ್ತಿರುವುದು ಖಂಡನೀಯ ಎಂದು ಪ್ರದೇಶ  ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

- Advertisement -

ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ದೇವಸ್ಥಾನಗಳ ಅರ್ಚಕರು ಮತ್ತು ಬ್ರಾಹ್ಮಣರ ಕುಟುಂಬ ಸದಸ್ಯರಿಗೆ ಪ್ರತ್ಯೇಕವಾಗಿ ಕೋವಿಡ್ ಲಸಿಕೆ ಶಿಬಿರ ಆಯೋಜಿಸಿರುವ ಕುರಿತು ಟ್ವೀಟ್ ಗಳನ್ನು ಮಾಡಿರುವ ರಕ್ಷಾ ರಾಮಯ್ಯ, ಲಸಿಕೆಯಲ್ಲಿ ಜಾತಿ, ಧರ್ಮ ತಂದು ಬೇಧ – ಭಾವ ಮಾಡುತ್ತಿರುವುದು ಅತ್ಯಂತ ಖಂಡನೀಯ. ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ಕದ್ದು ಮುಚ್ಚಿ ಲಸಿಕೆ ಅಭಿಯಾನ ನಡೆಸಿದ್ದು ಏಕೆ ಎಂದು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ಒಂದು ಕಡೆ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾಯಿಸಿ ಸಾವಿನ ಮನೆಯಲ್ಲೂ ಹಗಲು ದರೋಡೆ ಮೂಲಕ ಹಣ ಗಳಿಸುವ ಹೀನ ಕೆಲಸದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಸಿ..ವಿ ರಾಮನ್ ನಗರದಲ್ಲಿ ಬಿಜೆಪಿ ಶಾಸಕ ಎಸ್. ರಘು ಸಾಮಾನ್ಯ ಜನರನ್ನು ನಿರ್ಲಕ್ಷಿಸಿ ಬಿಜೆಪಿ ಕಾರ್ಯಕರ್ತರಿಗೆ ಪ್ರತ್ಯೇಕ ಲಸಿಕಾ ಅಭಿಯಾನ ನಡೆಸಿದ್ದಾರೆ. ನಿಯಮಬದ್ಧವಾಗಿ ನೋಂದಣಿ ಮಾಡಿಕೊಂಡು ಸರತಿ ಸಾಲಿನಲ್ಲಿ ನಿಂತವರಿಗೆ ನೀಡಬೇಕಾಗಿದ್ದ ಲಸಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ವರ್ಗಾಯಿಸಿ ಘೋರ ಅಪರಾಧ ಮಾಡಿ ಜನ ಆಕ್ರೋಶಕ್ಕೆ ಒಳಗಾಗುವಂತೆ ಮಾಡಿರುವುದಾಗಿ ಟೀಕಿಸಿದ್ದಾರೆ.

- Advertisement -

ಮಲ್ಲೇಶ್ವರಂನಲ್ಲಿ ದಲಿತರಿಗೆ ಲಸಿಕೆ ನಿರಾಕರಿಸಿ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕವಾಗಿ ಲಸಿಕೆ ಹಾಕಿಸಿರುವುದು ನಿಜಕ್ಕೂ ಸರಿಯಲ್ಲ. ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅಶ್ವತ್ಥ ನಾರಾಯಣ ಅವರು ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ್ದಾರೆ. ಅವರ ಈ ಕ್ರಮದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾರತಮ್ಯ ಧೋರಣೆ ಅನುಸರಿಸಿ ಏನೂ ಆಗಿಯೇ ಇಲ್ಲ ಎನ್ನುವಂತೆ ಲಜ್ಜೆ ಬಿಟ್ಟು  ಉಪಮುಖ್ಯಮಂತ್ರಿ ಅವರು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ. ಸೋಂಕು ನಿಯಂತ್ರಣಕ್ಕೆ ಪ್ರಮುಖ ಅಸ್ತ್ರವಾಗಿರುವ ಲಸಿಕೆಯಲ್ಲೂ ಲಾಭ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಬಿಜೆಪಿಯವರು ಕೊರೋನಾ ವೈರಸ್ ಗಿಂಗಲೂ ಅಪಾಯಕಾರಿ ಎಂದು ರಕ್ಷಾ ರಾಮಯ್ಯ ಟೀಕಿಸಿದ್ದಾರೆ. ಈ ಮಧ್ಯೆ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಲ್ಲೇಶ್ವರಂ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಶಾ ಅವರು ದೂರು ಸಲ್ಲಿಸಿದ್ದಾರೆ.

Join Whatsapp