ರಾಖಿ ಕಟ್ಟುವ ಷರತ್ತಿನೊಂದಿಗೆ ಲೈಂಗಿಕ ಕಿರುಕುಳ ಆರೋಪಿಗೆ ಜಾಮೀನು ನೀಡಿದ ಮಧ್ಯಪ್ರದೇಶ ಹೈಕೋರ್ಟ್: ಸುಪ್ರೀಂಗೆ ಮೇಲ್ಮನವಿ

Prasthutha|

ಹೊಸದಿಲ್ಲಿ: ದೂರುದಾರ ಮಹಿಳೆಗೆ ರಾಖಿ ಕಟ್ಟಬೇಕೆಂಬ ಷರತ್ತಿನ ಮೇಲೆ ಲೈಂಗಿಕ ಕಿರುಕುಳ ಪ್ರಕರಣವೊಂದರ ಆರೋಪಿಗೆ ಜಾಮೀನು ನೀಡಿದ ಮಧ್ಯಪ್ರದೇಶ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಇಂದು ಅಟಾರ್ನಿ ಜನರಲ್ ರ ಸಹಾಯವನ್ನು ಕೋರಿದೆ.

- Advertisement -

ಇದು ಕಾನೂನಿನ ಮೂಲ ತತ್ವಕ್ಕೆ ವಿರುದ್ಧವಾಗಿರುವುದರಿಂದ ದೇಶಾದ್ಯಂತ ನ್ಯಾಯಾಲಯಗಳು ಇಂಥಹ ಷರತ್ತುಗಳನ್ನು ವಿಧಿಸುವುದರಿಂದ ದೂರ ನಿಲ್ಲಬೇಕೆಂದು ಕೋರಿ ಒಂಬತ್ತು ಮಹಿಳಾ ನ್ಯಾಯವಾದಿಗಳ ಮೇಲ್ಮನವಿ ಕುರಿತು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠವು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ರ ಕಚೇರಿಗೆ ನೊಟೀಸನ್ನು ಜಾರಿ ಮಾಡಿದೆ.

ಆರೋಪಿಯು ತನ್ನ ಪತ್ನಿಯೊಂದಿಗೆ ದೂರುದಾರೆಯ ಮನೆಗೆ ತೆರಳಿ ಮುಂಬರುವ ಎಲ್ಲಾ ದಿನಗಳಲ್ಲಿ ತನ್ನ ಸಾಮರ್ಥ್ಯಕ್ಕನುಗುಣವಾಗಿ ತನ್ನನ್ನು ರಕ್ಷಿಸುತ್ತೇನೆಂಬ ಭರವಸೆಯೊಂದಿಗೆ ಆಕೆಗೆ ರಾಖಿ ಕಟ್ಟಬೇಕೆಂಬ ಷರತ್ತಿನೊಂದಿಗೆ ಹೈಕೋರ್ಟ್ ಜುಲೈ 30ರಂದು ಜಾಮೀನು ನೀಡಿತ್ತು.

- Advertisement -

ವಕೀಲೆ ಅಪರ್ಣಾ ಭಟ್ ಒಳಗೊಂಡಂತೆ ದೂರುದಾರೆಯರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಸಂಜಯ್ ಪಾರಿಕ್, ಅಸಾಧಾರಣ ಸಂದರ್ಭದಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿದೆ ಎಂದಿದ್ದಾರೆ. ಇಂತಹ ಷರತ್ತುಗಳು ಮಹಿಳೆಯ ಆಘಾತವನ್ನು ಅತ್ಯಂತ ಕ್ಷುಲ್ಲಕವಾಗಿ ಕಾಣಲಿದೆ ಎಂದು ಅವರು ಹೇಳಿದ್ದಾರೆ.

ತಾವು ಮಧ್ಯಪ್ರದೇಶಕ್ಕೆ ಸಂಬಂಧಿಸಿದಂತೆ ಈ ಮನವಿಯನ್ನು ಮಾಡುತ್ತಿದ್ದೀರೇ ಅಥವಾ ಇಡೀ ದೇಶವನ್ನು ಉಲ್ಲೇಖಿಸಿಯೇ? ಎಂದು ಪೀಠವು ಅವರನ್ನು ಕೇಳಿದ್ದು, ಇಡೀ ದೇಶದ ಹೈಕೋರ್ಟ್ ಗಳು ಮತ್ತು ವಿಚಾರಣಾ ಕೋರ್ಟ್ ಗಳು ಇಂತಹ ಅವಲೋಕನಗಳನ್ನು ಮಾಡುವುದರಿಂದ ದೂರವಿರಬೇಕೆಂದು ಕೋರುತ್ತೇವೆ ಎಂದು ಅವರು ಉತ್ತರಿಸಿದರು.



Join Whatsapp