ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅವರನ್ನು ನೇಮಕಗೊಳಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.
ರಾಜೀವ್ ಕುಮಾರ್ ಅವರು ಮೇ 15ರಂದು ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
1984 ರ ಜಾರ್ಖಂಡ್ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಅವರಿಂದ ಅಧಿಕಾರ ವಹಿಸಲಿದ್ದಾರೆ.
ಹಣಕಾಸು ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ರಾಜೀವ್ ಕುಮಾರ್ ಅವರು ಮೋದಿಯವರ ಪ್ರಮುಖ ಯೋಜನೆಗಳಾದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಮುದ್ರಾ ಸಾಲ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸರ್ಕಾರದ ವಿಶ್ವಾಸ ಗಳಿಸಿದ್ದರು.
ಕಳೆದ ಏಪ್ರಿಲ್ ನಲ್ಲಿ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ರಾಜೀವ್ ಕುಮಾರ್ ಅವರನ್ನು ಮೂರು ವರ್ಷಗಳ ಅವಧಿಗೆ ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿತ್ತು.
ಈ ಮಧ್ಯೆ ಅಶೋಕ್ ಲಾವಾಸಾ ಅವರು ಮುಂದಿನ ತಿಂಗಳು ಫಿಲಿಪೈನ್ಸ್ ಮೂಲದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಉಪಾಧ್ಯಕ್ಷ ಹುದ್ದೆಗೆ ಸೇರಲಿದ್ದಾರೆ