ರಣಜಿ ಟ್ರೋಫಿ ಫೈನಲ್: ರಜತ್ ಪಾಟೀದಾರ್ ಶತಕ, ಮಧ್ಯಪ್ರದೇಶ ಮೇಲುಗೈ

Prasthutha|

ಬೆಂಗಳೂರು: ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಎದುರು ಮಧ್ಯಪ್ರದೇಶ ತಂಡ ಮೇಲುಗೈ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಮುಂಬೈ ಎರಡು ವಿಕೆಟ್ ನಷ್ಟದಲ್ಲಿ  113ರನ್ ಕಲೆಹಾಕಿದ್ದು, ಮಧ್ಯಪ್ರದೇಶದ ಮೊದಲ ಇನ್ನಿಂಗ್ಸ್‌ ಮೊತ್ತವನ್ನು ತಲುಪಲು ಇನ್ನೂ 49ರನ್‌ಗಳ ಹಿನ್ನಡೆಯಲ್ಲಿದೆ. ಭಾನುವಾರ ಪಂದ್ಯದ ಕೊನೆಯ ದಿನವಾಗಿದ್ದು, ಮಧ್ಯಪ್ರದೇಶದ ಪಾಳಯದಲ್ಲಿ ಚೊಚ್ಚಲ ಪ್ರಶಸ್ತಿಯ ಸಣ್ಣ ಭರವಸೆ ಮೂಡಿದೆ.

- Advertisement -

ಪಾಟೀದಾರ್‌ ಶತಕ,  ಮಧ್ಯಪ್ರದೇಶ ಬೃಹತ್‌ ಮೊತ್ತ 

ಮುಂಬೈ ಬೌಲಿಂಗ್‌ ದೌರ್ಬಲ್ಯವನ್ನು ಯಶಸ್ವಿಯಾಗಿ ಬಳಸಿಕೊಂಡ ಮಧ್ಯಪ್ರದೇಶ, ಮೊದಲ ಇನ್ನಿಂಗ್ಸ್‌ನಲ್ಲಿ 536ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.  ಆ ಮೂಲಕ 162ರನ್‌ಗಳ ಮುನ್ನಡೆ ಸಾಧಿಸಿತು.  ಮುಂಬೈ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ ರಜತ್ ಪಾಟೀದಾರ್ ಆಕರ್ಷಕ ಶತಕ ದಾಖಲಿಸಿದರು. ಮೂರನೇ ದಿನದಾಟದಲ್ಲಿ 67 ರನ್ ಕಲೆಹಾಕಿದ್ದ ಪಾಟೀದಾರ್, ನಾಲ್ಕನೇ ದಿನದಾಟದಲ್ಲಿ ಶತಕ ಪೂರ್ತಿಗೊಳಿಸಿದರು.  219 ಎಸೆತಗಳಲ್ಲಿ 122ರನ್ ಕಲೆಹಾಕಿದ ಪಾಟೀದಾರ್ ಇನ್ನಿಂಗ್ಸ್‌ 20 ಬೌಂಡರಿ ಒಳಗೊಂಡಿತ್ತು. ಇದಕ್ಕೂ ಮೊದಲು ಆರಂಭಿಕ ಯಶ್‌ ದುಬೆ  (133 ರನ್)‌, ಶುಭಂ ಶರ್ಮಾ (116 ರನ್‌) ಶತಕ ಸಿಡಿಸಿದ್ದರು. ಕೆಳಕ್ರಮಾಂಕದಲ್ಲಿ ಸರನ್ಷ್ ಜೈನ್ 57 ರನ್‌ಗಳ ಕೊಡುಗೆ ನೀಡಿದರು.  

- Advertisement -

ಮುಂಬೈ ಪರ ಬೌಲಿಂಗ್‌ನಲ್ಲಿ ಶಮ್ಸ್ ಮುಲಾನಿ 5 ವಿಕೆಟ್‌ , ತುಷಾರ್ ದೇಶಪಾಂಡೆ 3, ಮೋಹಿತ್ ಅವಸ್ತಿ 2 ವಿಕೆಟ್ ಪಡೆದರು. 162ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಮುಂಬೈ ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 113ರನ್ ಕಲೆಹಾಕಿದೆ. 30 ಗಳಿಸಿರುವ ಅರ್ಮಾನ್ ಜಾಫರ್ ಮತ್ತು ಸುವೇದ್ ಪಾರ್ಕರ್ 9 ರನ್‌ಗಳಿಸಿ ಅಜೇಯರಾಗುಳಿಸಿದ್ದಾರೆ. ಮುಂಬೈ ಪರ ಇನ್ನಿಂಗ್ಸ್‌ ಆರಂಭಿಸಿದ್ದ ನಾಯಕ  ಪೃಥ್ವಿ ಶಾ 44 ಮತ್ತು ಕೀಪರ್‌ ಹಾರ್ದಿಕ್ ತಮೋರ್ 25 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

Join Whatsapp