ಹೊಸದಿಲ್ಲಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಒಗ್ಗಟ್ಟಾಗಿದೆ. ಭಾರತ್ ಜೋಡೊ ಯಾತ್ರೆಯನ್ನು ಪೂರ್ಣವಾಗಿ ಯಶಸ್ಸುಗೊಳಿಸಲು ಗಮನವನ್ನು ಕೇಂದ್ರೀಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ನಾಯಕನ ಹೇಳಿಕೆ ರಾಜಸ್ಥಾನದಲ್ಲಿ ಪಕ್ಷದ ಆಂತರಿಕ ಭಿನ್ನಮತ ‘ಭಾರತ್ ಜೋಡೋ’ ಯಾತ್ರೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ದೂರ ಮಾಡಿದೆ.
‘ತಮ್ಮ ಮತ್ತು ಮುಖ್ಯಮಂತ್ರಿ ನಡುವಣ ಭಿನ್ನಾಭಿಪ್ರಾಯದ ಲಾಭ ಪಡೆಯಲು ಬಿಜೆಪಿ ಹವಣಿಸಿತ್ತು. ವಾಸ್ತವವಾಗಿ ಬಿಜೆಪಿಯಲ್ಲಿಯೇ ಸಾಕಷ್ಟು ಭಿನ್ನಮತವಿದೆ. ಆ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕನಿಷ್ಠ 12 ಜನ ಕಣ್ಣಿಟ್ಟಿದ್ದಾರೆ’ ಎಂದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಪೂರ್ಣ ಒಗ್ಗಟ್ಟಿದೆ. ಅದರ ಪೂರ್ಣ ಯಶಸ್ಸಿಗೆ ನಾವು ಸಜ್ಜಾಗಿದ್ದೇವೆ. ಒಂದು ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.