ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಈ ಸಾಲಿನ ಬಜೆಟ್ ಪ್ರತಿ ಓದುವ ಬದಲು ಕಳೆದ ವರ್ಷದ ಬಜೆಟ್ ಪ್ರತಿ ಓದಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ಸಿಎಂ ಅವರು ಬಜೆಟ್’ನ ಮೊದಲ ಎರಡು ಘೋಷಣೆಗಳನ್ನು ಓದುತ್ತಿದ್ದಂತೆ ಪ್ರತಿಪಕ್ಷಗಳು ಗದ್ದಲ ಸೃಷ್ಟಿಸಿದವು, ಸದನದ ಬಾವಿಗೆ ನುಗ್ಗಿದವು.
ಪ್ರತಿಪಕ್ಷಗಳು ಮೌನವಾಗಿರುವಂತೆ ಸ್ಪೀಕರ್ ಸಿಪಿ ಜೋಶಿ ಅವರು ಕೇಳಿಕೊಂಡರೂ ಅವರು ಗದ್ದಲ ಮುಂದುವರಿಸಿದರು. ಈ ಕಾರಣದಿಂದ ಅರ್ಧ ಗಂಟೆ ಕಾಲ ಸದನವನ್ನು ಮುಂದೂಡಲಾಯಿತು. ಕಲಾಪ ಮುಂದೂಡಿದ ಬಳಿಕ ಬಿಜೆಪಿ ಶಾಸಕರು ಸದನದ ಬಾವಿಯೊಳಗೆ ಧರಣಿ ನಡೆಸಿದರು.
‘8 ನಿಮಿಷಗಳ ಕಾಲ ಸಿಎಂ ಹಳೆಯ ಬಜೆಟ್ ಪ್ರತಿಯನ್ನೇ ಓದಿದರು. ನಾನು ಸಿಎಂ ಆಗಿದ್ದಾಗ ಕನಿಷ್ಠ ಎರಡು-ಮೂರು ಬಾರಿ ಬಜೆಟ್ ಪ್ರತಿ ಓದುತ್ತಿದ್ದೆ ಮತ್ತು ಪರಿಶೀಲಿಸುತ್ತಿದ್ದೆ. ಈ ರೀತಿಯ ದೊಡ್ಡ ದಾಖಲೆಯನ್ನು ನಿರ್ಲಕ್ಷ್ಯದಿಂದ ಓದಿರುವ ಸಿಎಂ ಕೈಯಲ್ಲಿ ರಾಜಸ್ಥಾನ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಯಾರಾದರೂ ಊಹಿಸಬಹುದು’ ಎಂದು ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೆ ಸಿಂಧಿಯಾ ಟೀಕಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಜೆಟ್ ಅನ್ನು ಮೊದಲ ಬಾರಿಗೆ ನೇರಪ್ರಸಾರ ಮಾಡಲಾಗುತ್ತಿತ್ತು! ಹೀಗಾಗಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ
ಹಣಕಾಸು ಮಂತ್ರಿಗಳೂ ಆದ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈ ಅವಧಿಯ ಕೊನೆಯ 2023-24ರ ರಾಜ್ಯ ಬಜೆಟ್ ಮಂಡಿಸಿದರು. ಅದರಲ್ಲಿ ಉಚಿತ ವಿದ್ಯುತ್, ಉಚಿತ ಸ್ಕೂಟಿ ನೀಡುವುದಾಗಿ ಪ್ರಕಟಿಸಿದ್ದಾರೆ.
ಹಿಂದೆ ತಿಂಗಳಿಗೆ ಮನೆಗೆ 50 ಯೂನಿಟ್ ವಿದ್ಯುತ್ ಉಚಿತವಿದ್ದುದನ್ನು 100 ಯೂನಿಟ್’ಗೆ ಹೆಚ್ಚಿಸಲಾಗಿದೆ.
ನಾನಾ ಸರಕಾರಿ ಕೆಲಸದ ಪರೀಕ್ಷೆಗೆ ವಿಭಿನ್ನ ಶುಲ್ಕ ಇಲ್ಲ ಎಂದು ತಿಳಿಸಲಾಗಿದೆ. ಕುಟುಂಬ ಆರೋಗ್ಯಕ್ಕೆ ಚಿರಂಜೀವಿ ಆರೋಗ್ಯ ಯೋಜನೆ, ರೂ. 10 ಲಕ್ಷದಿಂದ 25 ಲಕ್ಷಕ್ಕೆ ಏರಿಸಲಾಗಿದೆ. ಉಜ್ವಲ ಯೋಜನೆಯಲ್ಲಿ ಸುಮಾರು 76 ಲಕ್ಷ ಕುಟುಂಬಗಳಿಗೆ ರೂ. 500ಕ್ಕೆ ಒಂದು ಸಿಲಿಂಡರ್ ನೀಡುವುದಾಗಿ ಪ್ರಕಟಿಸಲಾಗಿದೆ.
ಜೋಧಪುರ, ಮಾರ್ವಾರ್ ಸಹಿತ ಮೂರು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು. ಇಡಬ್ಲ್ಯುಎಸ್ ಕುಟುಂಬಗಳಿಗೆ 5ರಿಂದ 10 ಲಕ್ಷ ರೂಪಾಯಿಗಳ ಅಪಘಾತ ವಿಮೆ ನೀಡಲಾಗುವುದು. ಹೊಲಿಗೆ ಯಂತ್ರಗಳಿಗೆ ಮಹಿಳೆಯರಿಗೆ ರೂ. 5,000 ಹಾಗೂ ಜೈಪುರದಲ್ಲಿ ರಾಜೀವ್ ಗಾಂಧಿ ವೈಮಾನಿಕ ವಿಶ್ವವಿದ್ಯಾನಿಲಯ, ಸಂಶೋಧನಾ ವಿದ್ಯಾರ್ಥಿಗಳಿಗೆ ರೂ. 30,000 ನೆರವು, ಯುವ ಕೌಶಲ್ಯ ವೃದ್ಧಿಗೆ ರೂ. 500 ಕೋಟಿ ನೆರವು. 75 ಕಿಮೀವರೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಸೇವೆ, ವಿದ್ಯಾರ್ಥಿನಿಯರಿಗೆ ವಿದ್ಯುತ್ ಸ್ಕೂಟಿ ಕೊಡುಗೆ ನೀಡುವುದಾಗಿ ಹೇಳಲಾಗಿದೆ.
12ನೇ ತರಗತಿಯವರೆಗೆ ಎಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುವುದು. ರೂ. 300 ಕೋಟಿಯಲ್ಲಿ ಜೈಪುರದಲ್ಲಿ ಎಪಿಜೆ ಅಬ್ದುಲ್ ಕಲಾಂ ಜೈವಿಕ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ, 30,000 ಸ್ವೀಪರ್ ಗಳ ನೇಮಕ ಮಾಡಲಾಗುವುದು ಎಂದು ಆಶ್ವಾಸನೆ ನೀಡಲಾಗಿದೆ.
ರಾಜಸ್ತಾನದಲ್ಲಿ ಡಿಸೆಂಬರ್ ನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ.