ಸಾನಿಯಾ ಮಿರ್ಝಾ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ರಾಜಾ ಸಿಂಗ್ : ಪಿ.ವಿ.ಸಿಂಧುರನ್ನು ತೆಲಂಗಾಣ ರಾಯಭಾರಿಯನ್ನಾಗಿಸಲು ಒತ್ತಾಯ

Prasthutha|

ಹೈದರಾಬಾದ್ : ತೆಲಂಗಾಣದ ಗೋಶಮಹಲ್ ಅಸೆಂಬ್ಲಿಯ ಬಿಜೆಪಿ ಶಾಸಕರಾದ ರಾಜಾಸಿಂಗ್ ಅವರು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ವಿರುದ್ಧ “ಪಾಕಿಸ್ತಾನದ ಸೊಸೆ” ಯೆಂದು ನಿಂದಿಸುವ ಮೂಲಕ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಅದೇ ರೀತಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರನ್ನು ತೆಲಂಗಾಣದ ರಾಯಭಾರಿಯಾಗಿ ನೇಮಿಸುವಂತೆ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಒತ್ತಾಯಿಸಿದ್ದಾರೆ.

- Advertisement -

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ಅವರ ವಿಜಯದ ಹಿನ್ನೆಲೆಯಲ್ಲಿ ವೀಡಿಯೋ ಬಿಡುಗಡೆಗೊಳಿಸಿ ಹೇಳಿಕೆ ನೀಡಿರುವ ಶಾಸಕ ರಾಜಾ ಸಿಂಗ್, ಬ್ಯಾಡ್ಮಿಂಟನ್ ತಾರೆ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆಂದು ಹೇಳಿದರು. ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಯ ಮಹತ್ವದ ಕುರಿತು ಒತ್ತಿ ಹೇಳಿದ ಅವರು ಅದಕ್ಕಾಗಿ ವಿಶೇಷ ಬಜೆಟನ್ನು ಮೀಸಲಿಡುವಂತೆ ಕೆಸಿಆರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಾಸಕರಾದ ರಾಜಾ ಸಿಂಗ್ ಅವರು ಈ ಹಿಂದೆಯೂ ಟೆನಿಸ್ ತಾರೆ ಸಾನಿಯಾ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ರು. ಪುಲ್ವಾಮ ದಾಳಿಯ ನಂತರ ಸಾನಿಯಾ ಮಿರ್ಝಾ ಅವರನ್ನು ತೆಲಂಗಾಣದ ರಾಯಭಾರಿ ಹುದ್ದೆಯಿಂದ ತೆರವುಗೊಳಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದರು. 2014 ರಲ್ಲಿ ಸಾನಿಯಾ ಅವರನ್ನು ತೆಲಂಗಾಣದ ರಾಯಭಾರಿಯಾಗಿ ಹೆಸರಿಸಲಾಗಿತ್ತು.
ಸಿಂಧು ಭಾನುವಾರ ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು.

- Advertisement -

ಜುಲೈ 25 ರಂದು ನಡೆದ ಮಹಿಳೆಯರ ಡಬಲ್ಸ್ ನಲ್ಲಿ ಮಿರ್ಝಾ, ಅಂಕಿತಾ ರೈನಾ ಜೋಡಿ ಮೊದಲ ಸುತ್ತಿನಲ್ಲಿಯೇ ಸೋಲುವ ಮೂಲಕ ಟೋಕಿಯೋ ಒಲಿಂಪಿಕ್ಸ್ ಅಭಿಯಾನವನ್ನು ಕೊನೆಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾನಿಯಾ ಮಿರ್ಝಾ ವಿರುದ್ಧ ಶಾಸಕ ರಾಜಾ ಸಿಂಗ್ ಅವರ ಹೇಳಿಕೆ ನೀಡಿದ್ದಾರೆ

Join Whatsapp