ಧನಬಾದ್: (ಜಾರ್ಖಂಡ್) ಖಾತಿಕ್ ಬಸ್ತಿಯಲ್ಲಿರುವ ಹನುಮಂತನ ಗುಡಿಯ ಸುತ್ತ ವಾಸವಾಗಿರುವ ಐದು ಡಜನ್ ಗೂ ಅಧಿಕ ಜನರಿಗೆ ಒತ್ತುವರಿ ತೆರವು ಮಾಡುವಂತೆ ರೈಲ್ವೆ ಇಲಾಖೆ ನೋಟಿಸ್ ನೀಡಿದೆ.
ಆ ಹನುಮಂತನ ಗುಡಿಯೂ ಸಹ ರೈಲ್ವೆ ಜಾಗ ಅತಿಕ್ರಮಿಸಿದ್ದು, ಅದನ್ನು ತೆರವು ಮಾಡಿ. ಇಲ್ಲದಿದ್ದರೆ ಹನುಮಂತನಿಗೂ ನೋಟಿಸ್ ನೀಡಲಾಗುವುದು ಎಂದು ರೈಲ್ವೆಯವರು ಎಚ್ಚರಿಸಿದ್ದಾರೆ.
ಜಾರ್ಖಂಡಿನ ಧನಬಾದ್ ಜಿಲ್ಲಾ ಕೇಂದ್ರದಲ್ಲೇ ಈ ಅತಿಕ್ರಮಣ ಹನುಮಂತನಿಂದ ಆಗಿರುವುದಾಗಿ ಹೇಳಲಾಗಿದೆ. “ಹನುಮಂತಾ, ನಿನ್ನ ಗುಡಿಯನ್ನು ಖಾಲಿ ಮಾಡಿ ರೈಲ್ವೆ ಜಾಗವನ್ನು ಹಿಂದಿರುಗಿಸು” ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ನಗರದ ಪಶ್ಚಿಮ ಭಾಗದಲ್ಲಿ ಈ ಗುಡಿಯ ಗೋಡೆಗೆ ನೋಟಿಸ್ ಅಂಟಿಸಲಾಗಿದ್ದು 10 ದಿನದೊಳಗೆ ಖಾಲಿ ಮಾಡಿ ಹೋಗುವಂತೆ ಮಾರುತಿಗೆ ಸೂಚಿಸಲಾಗಿದೆ. ನೇರವಾಗಿ ಹನುಮಾನ್ ಜಿ ಎಂದು ಆರಂಭವಾಗುವ ನೋಟಿಸ್, ದೇವಾ, ನೀನು ರೈಲ್ವೆ ಜಾಗ ಅತಿಕ್ರಮಿಸಿರುವೆ, ಹತ್ತು ದಿನಗಳಲ್ಲಿ ಜಾಗ ಬಿಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂಬ ಎಚ್ಚರಿಕೆ ನೀಡಲಾಗಿದೆ.
ಗುಡಿ ಬದಿಯ ಖಾತಕ್ ಬಸ್ತಿಯಲ್ಲಿ ವಾಸಿಸುವ 60ರಷ್ಟು ಜನರಿಗೂ ಈ ಒತ್ತುವರಿ ಬಗ್ಗೆ ನೋಟೀಸ್ ನೀಡಲಾಗಿದೆ. ನಾವು 1921ರಿಂದಲೂ ಇಲ್ಲಿ ವಾಸಿಸುತ್ತಿರುವುದಾಗಿ ಅಲ್ಲಿನ ಜನರು ಹೇಳುತ್ತಾರೆ. ಇವರೆಲ್ಲ ಹಣ್ಣು, ತರಕಾರಿ ಮುಂತಾದ ಸಣ್ಣ ಪುಟ್ಟ ವ್ಯಾಪಾರ ನಡೆಸಿ ಜೀವನ ಸಾಗಿಸುವವರು. ಅವರಿಗೂ ನೋಟಿಸ್ ನೀಡಿ ತೆರವು ಮಾಡಿ ಎಂದು ಸೂಚಿಸಲಾಗಿದೆ.
ಸ್ಥಳೀಯರು ರೈಲ್ವೆ ನೋಟಿಸ್ ನ ವಿರುದ್ಧ ಬಂಡೆದ್ದಿದ್ದಾರೆ. ನಿನ್ನೆ ಮತ್ತು ಮೊನ್ನೆ ಸುತ್ತಮುತ್ತಲಿನ ಹಲವರು ಗುಂಪುಗೂಡಿ ರೈಲ್ವೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.