ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ, ಭಾರತ ತಂಡದ ಟೆಸ್ಟ್ ಗೋಡೆ ಎಂದು ಖ್ಯಾತಿಯಾಗಿರುವ ರಾಹುಲ್ ದ್ರಾವಿಡ್ ನೇಮಕ ಗೊಂಡಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸತತ ಪ್ರಯತ್ನದ ಫಲವಾಗಿ ರಾಹುಲ್ ದ್ರಾವಿಡ್ ಅವರು ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲು ಒಪ್ಪಿಗೆ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಹುಲ್ ದ್ರಾವಿಡ್ ಅವರಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಎರಡು ವರ್ಷಗಳ ಗುತ್ತಿಗೆ ನೀಡಲಾಗಿದ್ದು, ದ್ರಾವಿಡ್ ಅವರು 10 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ವರದಿಯು ತಿಳಿಸಿದೆ. ಈ ಸಂಭಾವನೆಯು ಒಂದು ವರ್ಷಕ್ಕೋ ಅಥವಾ, ಎರಡು ವರ್ಷಗಳ ಅವಧಿಗೋ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಈ ಮೊದಲು ಮೂರು ಬಾರಿ ಬಿಸಿಸಿಐ ಕೋಚ್ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ ಕೋಚ್ ಹುದ್ದೆ ನಿರಾಕರಿಸಿದ್ದ ದ್ರಾವಿಡ್ ಎನ್ ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಯ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದರು.
ಇದೀಗ ಶೀಘ್ರದಲ್ಲಿ nca ಹುದ್ದೆ ತೊರೆಯಲಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯವಾಗಲಿದ್ದು, ನಂತರ ರಾಹುಲ್ ದ್ರಾವಿಡ್ ಕೋಚ್ ಹುದ್ದೆ ಸ್ವೀಕರಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.