14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ನಡಾಲ್

Prasthutha|

ಪ್ರತಿಷ್ಠಿತ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್’ನ ರಾಫೆಲ್ ನಡಾಲ್ 14ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್’ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನಡಾಲ್, ಕಾಸ್ಪೆರ್ ರೂಡ್ ವಿರುದ್ಧ 6-3,6-3,6-0 ಅಂತರದಲ್ಲಿ ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಆ ಮೂಲಕ ತಮ್ಮ ಗ್ರ್ಯಾನ್ ಸ್ಲ್ಯಾಮ್‌ ದಾಖಲೆಯನ್ನು 22ಕ್ಕೆ ಏರಿಸಿದರು.
ತಮ್ಮ 36 ನೇ ಹುಟ್ಟುಹಬ್ಬದಂದು ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ನಡಾಲ್, ಎರಡು ದಿನಗಳ ಬಳಿಕ ಭಾನುವಾರ, ಫ್ರೆಂಚ್ ಓಪನ್ ಗೆದ್ದ ಅತಿ ಹಿರಿಯ ಆಟಗಾರ ಎನಿಸಿದರು.
ತಮ್ಮ 19ನೇ ವರ್ಷದಲ್ಲಿ 2005ರಲ್ಲಿ ಮೊದಲ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ನಡಾಲ್ 36ನೇ ವರ್ಷದಲ್ಲಿ 14ನೇ ಪ್ರಶಸ್ತಿ ಗೆಲ್ಲುವ ಮೂಲಕ ಅಮೋಘ ದಾಖಲೆಯನ್ನು ಮುಂದುವರಿಸಿದ್ದಾರೆ.
ಫ್ರೆಂಚ್ ಓಪನ್ ನಲ್ಲಿ ಇದುವರೆಗೂ 115 ಪಂದ್ಯಗಳನ್ನು ಆಡಿರುವ ನಡಾಲ್ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಸೋಲು ಅನುಭವಿಸಿದ್ದಾರೆ.
ಕಳೆದ ವರ್ಷದ ಫ್ರೆಂಚ್ ಓಪನ್ ಟೂರ್ನಿಯಲ್ ಸೆಮಿಫೈನಲ್‌ ಪಂದ್ಯದಲ್ಲಿ ನಡಾಲ್, ವಿಶ್ವ ನಂ.1 ಆಟಗಾರ ನೊವಾಕ್ ಜೊಕೊವಿಕ್ ಗೆ ಶರಣಾಗಿದ್ದರು. ಆದರೆ ಈ ಬಾರಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಡಾಲ್, ಜೊಕೊವಿಕ್‌ ಪಯಣಕ್ಕೆ ಅಂತ್ಯ ಹಾಡಿದ್ದರು.

Join Whatsapp