ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಕೋಚಿಂಗ್ ಗೆ ಚಾಲನೆ

Prasthutha|

ಆದಿತ್ಯಾ ಗ್ರೂಪ್ ನಿಂದ 20 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ

- Advertisement -

ಬೆಂಗಳೂರು; ಕೋವಿಡ್ -19 ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಆದಿತ್ಯ ಬಿರ್ಲಾ ಪ್ಯಾಷನ್ ರಿಟೈಲ್ ಜನ ಕಲ್ಯಾಣ ಲಿಮಿಟೆಡ್ ನ ಸಿ.ಎಸ್.ಆರ್. ಚಟುವಟಿಕೆಯಡಿ ನಗರದ ಆರ್.ವಿ. ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ ಮೆಂಟ್ [ಆರ್.ಎಸ್.ಎಸ್.ಟಿ] ಸಹಯೋಗದ ಜ್ಞಾನಾರ್ಜನ್ ಕಾರ್ಯಕ್ರಮದಡಿ 10 ನೇ ತರಗತಿ, ಪ್ರಥಮ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಉಚಿತ ಬೋಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

- Advertisement -

ಈ ಕಾರ್ಯಕ್ರಮದಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಇದರಿಂದ ವೃತ್ತಿ ಶಿಕ್ಷಣ ಕೋರ್ಸ್ ಗಳಾದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಸಹಕಾರಿಯಾಗಲಿದೆ.

ಕಳೆದ ವರ್ಷ ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಆದಿತ್ಯ ಬಿರ್ಲಾ ಪ್ಯಾಷನ್ ರಿಟೈಲ್ ಜನ ಕಲ್ಯಾಣ ಲಿಮಿಟೆಡ್ ನ ಮುಖ್ಯ ಅಧಿಕಾರಿ ಡಾ. ನರೇಶ್ ತ್ಯಾಗಿ, ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಮೂಲ ಸೌಕರ್ಯ ಇಲ್ಲದ, ಹೆಚ್ಚಿನ ತರಬೇತಿ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇದಕ್ಕಾಗಿ ಸಜ್ಜುಗೊಳಿಸಿರುವ ಸವಲತ್ತು ಮುಂದಿನ ಎರಡು ದಶಕಗಳ ಕಾಲ ಬೋಧನೆಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ಶಿಕ್ಷಕರ ಸಮಯ, ಬೋಧನೆ ಎಲ್ಲರಿಗೂ ಸಿಗುವುದಿಲ್ಲ. ಇದನ್ನು ವಿದ್ಯಾರ್ಥಿ ಸಮುದಾಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. 

ಆರ್.ಎಸ್.ಎಸ್.ಟಿ ನ ಜಂಟಿ ಕಾರ್ಯದರ್ಶಿ ಡಿ.ಪಿ. ನಾಗರಾಜ್ ಮಾತನಾಡಿ, ಆದಿತ್ಯಾ ಬಿರ್ಲಾ ಸಂಸ್ಥೆ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಜ್ಜುಗೊಳಿಸುತ್ತಿದೆ. ವಿದ್ಯಾರ್ಥಿಗಳು ಆಧುನಿಕ ಸಂಪರ್ಕ ಸಾಧನಗಳನ್ನು ಬದಿಗಿಟ್ಟು ಕಲಿಕೆಗೆ ಸಜ್ಜಾಗಬೇಕು. ಇದೀಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದ್ದು, ಇದಕ್ಕೆ ವಿದ್ಯಾರ್ಥಿಗಳು ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್.ಟಿ ಕಾರ್ಯದರ್ಶಿ ಎ.ವಿ.ಎಸ್. ಮೂರ್ತಿ, ಆದಿತ್ಯಾ  ಬಿರ್ಲಾ ರಿಟೈಲ್ ಜನ ಕಲ್ಯಾಣ್ ಲಿಮಿಟೆಡ್ ನ .ಸಿ.ಎಸ್.ಆರ್. ಚಟುವಟಿಕೆಯ ಗ್ರೂಪ್ ಮ್ಯಾನೇಜರ್ ಪುರುಷೋತ್ತಮ್ ರಾವ್, ಆರ್.ವಿ.ಐ.ಎಂನ ಡಾ. ಪುರುಷೋತ್ತಮ್ ಬಂಗ್ ಮತ್ತಿತರರರು ಉಪಸ್ಥಿತರಿದ್ದರು. 

Join Whatsapp