ಫುಟ್‌ಬಾಲ್‌ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯುವ ಕ್ರೀಡಾಂಗಣಗಳ ಸುತ್ತ ಬಿಯರ್ ಮಾರಾಟ ನಿಷೇಧ

Prasthutha|

ಮಹತ್ವದ ನಿರ್ಧಾರವೊಂದರಲ್ಲಿ ಫಿಫಾ ಮತ್ತು ಕತಾರ್‌, ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಗಳು ನಡೆಯುವ ಮೈದಾನಗಳ ಸುತ್ತ ಬಿಯರ್ ಮಾರಾಟವನ್ನು ನಿಷೇಧ ಮಾಡಿದೆ. ಕತಾರ್‌ ಇಸ್ಲಾಮಿಕ್‌ ಕಾನೂನುಗಳನ್ನು ಪಾಲಿಸುವ ರಾಜ್ಯವಾಗಿದ್ದು, ಮದ್ಯಪಾನ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳು ಈ ಪುಟ್ಟ ಶ್ರೀಮಂತ ರಾಷ್ಟ್ರದಲ್ಲಿ ಜಾರಿಯಲ್ಲಿದೆ.

- Advertisement -

ʻಕತಾರ್‌ ಸರ್ಕಾರದ ಜೊತೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆʼ ಎಂದು ಫುಟ್‌ಬಾಲ್‌ನ ಜಾಗತಿಕ ಆಡಳಿತ ಮಂಡಳಿ. ಫಿಫಾ ಪ್ರಕಟಣೆಯಲ್ಲಿ ತಿಳಿಸಿದೆ. ಈ  ನಿರ್ಧಾರಕ್ಕೆ ಯಾವುದೇ ಕಾರಣವನ್ನು  ಫಿಫಾ ಉಲ್ಲೇಖಿಸಿಲ್ಲ. ಅದಾಗಿಯೂ, ಕ್ರೀಡಾಂಗಣಗಳ ಒಳಗೆ ವಿಐಪಿ ಸೂಟ್‌ಗಳಲ್ಲಿ ಬಿಯರ್‌ ಲಭ್ಯವಾಗಲಿದೆ. ಈ ಸೂಟ್‌ಗಳನ್ನು ಫಿಫಾ ನಿಯಂತ್ರಿಸಲಿದೆ. ಉಳಿದಂತೆ ಕೆಲ ʻಖಾಸಗಿ ಅಭಿಮಾನಿ ವಲಯʼ,  ಸುಮಾರು 35 ಹೋಟೆಲ್ ಮತ್ತು ರೆಸ್ಟೋರೆಂಟ್- ಬಾರ್‌ಗಳಲ್ಲಿ ಬಿಯರ್ ಲಭ್ಯವಿರಲಿದೆ.

ಕತಾರ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವಂತಿಲ್ಲ. ಪಂಚತಾರಾ ಹೊಟೇಲ್‌ ಸೇರಿದಂತೆ ಕೆಲ ನಿರ್ಧಿಷ್ಟ ಸ್ಥಳಗಳಲ್ಲಷ್ಟೇ ಮದ್ಯ ಮಾರಾಟಕ್ಕೆ ಅವಕಾಶವಿದೆ  

- Advertisement -

ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯು ನಡೆಯುವ ಕತಾರ್‌ನ 8 ಮೈದಾನಗಳ ಸುತ್ತ ಬಿಯರ್‌ನ ಮಾರಾಟಕ್ಕೆಂದು ಸ್ಥಾಪಿಸಲಾಗಿದ್ದ  ಫ್ಯಾನ್ಸ್‌ ಝೋನ್‌ಗಳನ್ನು (ಅಭಿಮಾನಿ ವಲಯ) ತೆರವುಗೊಳಿಸಲಾಗುತ್ತದೆ ಎಂದು ಫಿಫಾ ತಿಳಿಸಿದೆ.

32 ರಾಷ್ಟ್ರಗಳು ಪಾಲ್ಗೊಳ್ಳುವ ವಿಶ್ವದ ಮಹಾ ಫುಟ್‌ಬಾಲ್‌ ಸಂಗಮಕ್ಕೆ ನವೆಂಬರ್‌ 20ರಂದು ಕತಾರ್‌ನ ರಾಜಧಾನಿ ದೋಹಾದಲ್ಲಿ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್‌,  ಈಕ್ವೆಡಾರ್ ಸವಾಲನ್ನು ಎದುರಿಸಲಿದೆ. ಈ ಪಂದ್ಯ ನಡೆಯುವ ಅಲ್‌ಬೈತ್‌ ಸ್ಟೇಡಿಯಂನ ಸುತ್ತ ಈಗಾಗಲೇ ಹತ್ತಕ್ಕೂ ಹೆಚ್ಚು  ಬಿಯರ್ ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ. ಇದೀಗ ಅನಿವಾರ್ಯವಾಗಿ ಅವುಗಳನ್ನು ತೆರವುಗೊಳಿಸಬೇಕಾಗಿದೆ.

ನವೆಂಬರ್‌ 20ರಿಂದ ಡಿಸೆಂಬರ್‌ 18ರವರೆಗೆ, 29 ದಿನಗಳ ನಡೆಯುವ, ಅತ್ಯಂತ ನಿಬಿಡ ವೇಳಾಪಟ್ಟಿಯನ್ನು ಹೊಂದಿರುವ ಟೂರ್ನಿಯನ್ನು ವೀಕ್ಷಿಸಲು ಹಲವು ರಾಷ್ಟ್ರಗಳಿಂದ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫುಟ್‌ಬಾಲ್‌ ಅಭಿಮಾನಿಗಳು ಕತಾರ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.

Join Whatsapp