ಬಿಡಬ್ಲ್ಯೂಎಫ್‌ ವಿಶ್ವ ಚಾಂಪಿಯನ್‌ಶಿಪ್| ಟೂರ್ನಿಯಿಂದ ಹಿಂದೆ ಸರಿದ ಪಿವಿ ಸಿಂಧು

Prasthutha|

ಪ್ರತಿಷ್ಠಿತ ಬಿಡಬ್ಲ್ಯೂಎಫ್‌ ವಿಶ್ವ ಚಾಂಪಿಯನ್‌ಶಿಪ್ ಆರಂಭವಾಗುವುದಕ್ಕೂ ಮುನ್ನವೇ  ಭಾರತದ ಪದಕ ನಿರೀಕ್ಷೆಗೆ ದೊಡ್ಡ ಹಿನ್ನಡೆಯಾಗಿದೆ. ಪಾದದ ಗಾಯದ ಕಾರಣದಿಂದ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು, ವಿಶ್ವ ಚಾಂಪಿಯನ್‌ಶಿಪ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.‌  

- Advertisement -

ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಏಕೈಕ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ 27 ವರ್ಷದ ಸಿಂಧು, ಇತ್ತೀಚೆಗಷ್ಟೇ ಮುಕ್ತಾಯವಾದ ಕಾಮನ್‌ವೆಲ್ತ್‌ ಗೇಮ್ಸ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಸಿಂಧು ಗಾಯದ ಕುರಿತು ಮಾಹಿತಿ ನೀಡಿರುವ ಸಿಂಧು ತಂದೆ ಪಿವಿ ರಮಣ ಅವರು, ಕಾಮನ್‌ವೆಲ್ತ್‌ ಗೇಮ್ಸ್‌ನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸಿಂಧು ಗಾಯಗೊಂಡಿದ್ದರು. ಸೆಮಿಫೈನಲ್‌ ಪಂದ್ಯದ ವೇಳೆಗೆ ಗಾಯ ಮತ್ತಷ್ಟು ಉಲ್ಬಣಗೊಂಡಿತ್ತು. ಆದರೂ ತೀವ್ರ ನೋವಿನ ನಡುವೆಯೂ ಹೋರಾಟವನ್ನು ಕೈಬಿಡದೆ ಆಡಿ ಚೊಚ್ಚಲ ಚಿನ್ನದ ಪದಕ ಗೆದ್ದಿದ್ದರು.

- Advertisement -

ಕಾಮನ್‌ವೆಲ್ತ್‌ ಗೇಮ್ಸ್‌ಗೂ ಮೊದಲು ನಡೆದ ಸಿಂಗಾಪುರ್‌ ಓಪನ್‌ ಟೂರ್ನಿಯಲ್ಲೂ ಪಿವಿ ಸಿಂಧು ಚಾಂಪಿಯನ್‌ ಆಗಿದ್ದರು. ಹೀಗಾಗಿ ಅಮೋಘ ಫಾರ್ಮ್‌ನಲ್ಲಿದ್ದ ಸಿಂಧು, ಬಿಡಬ್ಲ್ಯೂಎಫ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆಲ್ಲುವ ಫೇವರಿಟ್‌ ಎನಿಸಿದ್ದರು. ಆದರೆ ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ಆಘಾತ ಎದುರಾಗಿದೆ.

ಮುಂದಿನ ತಿಂಗಳು ನಡೆಯಲಿರುವ ಡೆನ್ಮಾರ್ಕ್‌-ಪ್ಯಾರಿಸ್‌ ಓಪನ್‌ ಟೂರ್ನಿಗಳಲ್ಲಿ ಸಿಂಧು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಿಡಬ್ಲ್ಯೂಎಫ್‌ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಸಿಂಧು ಇದುವರೆಗೂ ಒಟ್ಟು ಐದು ಪದಕಗಳನ್ನು ಗೆಲ್ಲುವ ಮೂಲಕ ಅತ್ಯಂತ ಯಶಸ್ವೀ ಭಾರತೀಯ ಆಟಗಾರ್ತಿ ಎನಿಸಿದ್ದಾರೆ.

2019ರಲ್ಲಿ ಚಿನ್ನದ ಪದಕ ಗೆದ್ದಿದ್ದ ಸಿಂಧು, 2017, 2018ರಲ್ಲಿ ಬೆಳ್ಳಿ ಪದಕ ಮತ್ತು 2013, 2014 ರಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

Join Whatsapp