ಪುತ್ತೂರು: ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ| ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಸ್‌ಡಿಪಿಐ ಒತ್ತಾಯ

Prasthutha|

ಪುತ್ತೂರು: ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಎಂಬ ಕ್ಷುಲ್ಲಕ ಕಾರಣವಿಟ್ಟು ಮಹಮ್ಮದ್ ಫಾರಿಸ್ ಎಂಬ ಮುಸ್ಲಿಂ ಯುವಕನ ಮೇಲೆ ಪಂಚವಟಿ ಎಂಬಲ್ಲಿಗೆ ಬಲವಂತವಾಗಿ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಒತ್ತಾಯಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಚುನಾವಣೆಗೆ ಇನ್ನೇನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇರುವ ಸಮಯದಲ್ಲಿ ಪುತ್ತೂರು ತಾಲ್ಲೂಕಿನಲ್ಲಿ ಸಂಘಪರಿವಾರ ಕೋಮು ಗಲಭೆ ನಡೆಸಿ ರಾಜಕೀಯ ದುರ್ಲಾಭವನ್ನು ಪಡೆಯಲು ಯತ್ನಿಸುತ್ತಿದೆ. ಅದರ ಭಾಗವಾಗಿ ಮುಸ್ಲಿಂ ವಿದ್ಯಾರ್ಥಿ ಮೇಲೆ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಎಂಬ ಕ್ಷುಲ್ಲಕ ಕಾರಣ ಇಟ್ಟುಕೊಂಡು ಸಂಘಪರಿವಾರದ ಕಾರ್ಯಕರ್ತರಿಗೆ ಕೋಮು ವಿಷ ಬೀಜ ಬಿತ್ತುವ ಕೇಂದ್ರವಾದ ಪಂಚವಟಿ ಎಂಬಲ್ಲಿಗೆ ಬಲವಂತವಾಗಿ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿ ಕೊಲೆಗೆ ಯತ್ನ ನಡೆಸಲಾಗಿದೆ.
ಪುತ್ತೂರಿನಲ್ಲಿ ಬಿಜೆಪಿ ಒಡೆದ ಮನೆಯಂತಾಗಿ ಸೋಲು ಗ್ಯಾರಂಟಿ ಎಂಬಂತಾಗಿದೆ. ಹಾಗಾಗಿ ತಾಲ್ಲೂಕಿನಲ್ಲಿ ಇಂತಹ ದುಷ್ಕೃತ್ಯ ನಡೆಸಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಮತ ಪಡೆಯುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -


ಕೆಲವು ವರ್ಷಗಳ ಹಿಂದೆ ಎಬಿವಿಪಿ ಕಾರ್ಯಕರ್ತರು ಹಿಂದು ವಿದ್ಯಾರ್ಥಿನಿಯೋರ್ವಳನ್ನು ಅತ್ಯಾಚಾರ ನಡೆಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಾಗ ಸುಮ್ಮನಾಗಿದ್ದ ಈ ಪುಂಡರು ಇಂದು ಅನ್ಯ ಧರ್ಮದ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಎಂಬ ಕಾರಣಕ್ಕಾಗಿ ಗೂಂಡಾಗಿರಿ ನಡೆಸುವುದಾದರೆ ಇದರ ಒಳಗುಟ್ಟು ಪುತ್ತೂರಿನ ಜನತೆಗೆ ಅರ್ಥವಾಗದ ವಿಚಾರವಲ್ಲ ಎಂದು ಅವರು ಕಿಡಿಕಾರಿದ್ದಾರೆ.


ಹಾಗಾಗಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಸಂಘಪರಿವಾರದ ಪುಂಡರ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಂಡು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕೆಂದು ಅವರು ಒತ್ತಾಯಿಸಿದ್ದಾರೆ.