ಪುತ್ತೂರು | ತರಗತಿ ಮುಗಿಸಿ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಅಪರಿಚಿತ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

Prasthutha|

ಪುತ್ತೂರು: ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಗುರುವಾರ ಸಂಜೆ ಪುತ್ತೂರು ಕೊಂಬೆಟ್ಟು ಜೂನಿಯರ್ ಕಾಲೇಜು ಬಳಿ ನಡೆದಿದೆ.

- Advertisement -


ಗಾಯಗೊಂಡ ವಿದ್ಯಾರ್ಥಿಗಳಾದ ರಿಯಾಝ್ ಮತ್ತು ಇಜಾಝ್ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಿಯಾಝ್ ಕೊಂಬೆಟ್ಟು ಅವರು ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದು, ಇಂದು ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಬೈಕೊಂದು ರಿಯಾಝ್ ಗೆ ಡಿಕ್ಕಿ ಹೊಡೆಯಲು ಯತ್ನಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ರಸ್ತೆ ಪಕ್ಕಕ್ಕೆ ಸರಿದಿದ್ದು ಅಪಾಯದಿಂದ ಪಾರಾಗಿದ್ದಾನೆ. ಇದನ್ನು ಕಂಡ ಅಲ್ಲೇ ಇದ್ದ ಮತ್ತೋರ್ವ ವಿದ್ಯಾರ್ಥಿ, ನಿಮಗೆ ಕಣ್ಣು ಕಾಣುವುದಿಲ್ಲವೇ ಎಂದು ಬೈಕ್ ನಲ್ಲಿದ್ದವರನ್ನು ಪ್ರಶ್ನಿಸಿದ್ದಾನೆ. ಆಗ ಬೈಕ್ ನಿಲ್ಲಿಸಿದ ದುಷ್ಕರ್ಮಿಗಳಿಬ್ಬರು ರಿಯಾಝ್ ಮತ್ತು ಇಜಾಝ್ ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.


ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಿಯೋಗ ಪುತ್ತೂರು ಆಸ್ಪತ್ರೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ದೂರು ನೀಡಿದೆ.

- Advertisement -


ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ , ಜಿಲ್ಲಾ ಕಾರ್ಯದರ್ಶಿ ಮುಸ್ತಫಾ, ರಾಜ್ಯ ಸಮಿತಿ ಸದಸ್ಯ ಸಮ್ಮಾನ್ ಅವರ ನೇತೃತ್ವ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿದೆ.
ಇದೊಂದು ವ್ಯವಸ್ಥಿತ ಷಡ್ಯಂತರವಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಒತ್ತಾಯಿದ್ದಾರೆ.

Join Whatsapp