ಮೋದಿ ಪರಿವಾರ ಸೇರಿದ ಪುತ್ತಿಲ ಪರಿವಾರ: ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ

Prasthutha|

ಬೆಂಗಳೂರು: ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ‌ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅವರು ಮೋದಿ ಪರಿವಾರವಾಗಿದ್ದಾರೆ.

- Advertisement -

2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಬೇರೆಯಾಗಿ ತನ್ಮದೇ ಪರಿವಾರ ಕಟ್ಟಿಕೊಂಡು ಸ್ಪರ್ಧೆ ಕೂಡ ಮಾಡಿದ್ದರು. ಪುತ್ತಿಲ ಸ್ಪರ್ಧೆಯಿಂದ ಬಿಜೆಪಿ ಭದ್ರಕೋಟೆಯಲ್ಲಿಯೇ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.

ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡ್ತಾರೆ ಎಂದು ಪುತ್ತಿಲ ಪರಿವಾರ ಘೋಷಣೆ ಮಾಡಿತ್ತು. ಇದೀಗ ಮತ್ತೆ ಘರ್ ವಾಪ್ಸಿಯಾಗಿದ್ದಾರೆ.

- Advertisement -

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಂಡಾಯ ಸಾರಿ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಪಕ್ಷವನ್ನು‌ ಮೂರನೇ ಸ್ಥಾನಕ್ಕೆ ತಳ್ಳಿದ್ದ ಅರುಣ್ ಕುಮಾರ್ ಪುತ್ತಿಲ ಬಳಿಕ‌ ಪುತ್ತಿಲ ಪರಿವಾರದ ಹೆಸರಲ್ಲಿ ರಾಜಕೀಯವಾಗಿ ಸಕ್ರಿಯರಾಗಿದ್ದರು. ಸ್ಥಳೀಯ ಚುನಾವಣೆಗಳಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಕೆಲ ದಿನಗಳ ಹಿಂದೆ ಬಿಜೆಪಿ ಮುಂದೆ ಕೆಲವು ಬೇಡಿಕೆಗಳನ್ನಿಟ್ಟಿದ್ದ ಪುತ್ತಿಲ ಪರಿವಾರ ಬಿಜೆಪಿಗೆ ಗಡುವು ಕೊಟ್ಟಿತ್ತು. ಆದರೆ ಬಿಜೆಪಿ ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಪುತ್ತಿಲ ಪರಿವಾರ ಘೋಷಿಸಿತ್ತು.

ಇದರ ಮಧ್ಯೆ ಪುತ್ತಿಲ ಪರಿವಾರದಲ್ಲಿ ಮಹಾ ಬಿರುಕು ಒಡಕು ಉಂಟಾಗಿದ್ದರಿಂದ ಪ್ರಮುಖ ನಾಯಕ ರಾಜಾರಾಮ್ ಹೊರ ಬಂದಿದ್ದರು. ನಾನು ಇನ್ಮುಂದೆ ಯಾವುದೇ ಸಂಘ, ಪರಿವಾರದ ವಕ್ತಾರ ಅಲ್ಲ ಎಂದು ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ರಾಜಾರಾಮ್​ ಪರಿವಾರದಲ್ಲಿ ನಡೆದ ಘಟನೆಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

ಇದೀಗ ಬಿಜೆಪಿಗೆ ಮರಳಿದ ಪುತ್ತಿಲ, ನರೇಂದ್ರ ಮೋದಿ ಅವರ ಕೆಲಸ‌ ಕಾರ್ಯಗಳಿಗೆ ಶಕ್ತಿ ತುಂಬಲು ಮುಂದಾಗಿದ್ದೇನೆ. ಪುತ್ತಿಲ ಪರಿವಾರ ಹಾಗೂ ಮೋದಿ ಪರಿವಾರ ಒಟ್ಟಿಗೆ ಕೆಲಸ ಕಾರ್ಯ ಮಾಡಲಿದೆ ಎಂದಿದ್ದಾರೆ.

ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮವಹಿಸುತ್ತೇವೆ. ದಕ್ಷಿಣ ಕನ್ನಡ ಅಭ್ಯರ್ಥಿ ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ.

Join Whatsapp