ಅಮೃತಸರ: ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿಯಾಗಿ ಗೆಲುವು ಗಳಿಸಿದ ಬಳಿಕ ಮುಖಮಂತ್ರಿಯಾಗಿ ಆಯ್ಕೆಯಾಗಲಿರುವ ಭಗವಂತ್ ಮಾನ್ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾನುವಾರ ಅಮೃತಸರದಲ್ಲಿರುವ ಸಿಖ್ ಸಮುದಾಯದ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪಂಜಾಬ್ ಆಮ್ ಆದ್ಮಿ ಪಕ್ಷಕ್ಕೆ ಅಭೂತಪೂರ್ವ ವಿಜಯ ಲಭಿಸಿದ್ದು, ಇಂದು ಸಂಭ್ರಮಾಚರಣೆಯ ಅಂಗವಾಗಿ ನಡೆಯುವ ರೋಡ್ ಶೋ ನಲ್ಲಿ ಭಾಗವಹಿಸಲು ಪಂಜಾಬ್ ತಲುಪಿರುವ ದೆಹಲಿ ಮುಖಮಂತ್ರಿ, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ನೂತನ ಮುಖ್ಯಮಂತ್ರಿ ಆಗಲಿರುವ ಭಗವಂತ್ ಮಾನ್ ರೋಡ್ ಶೋ ಕಾರ್ಯಕ್ರಮಕ್ಕೂ ಮೊದಲು ಗೋಲ್ಡನ್ ಟೆಂಬಲ್ ಗೆ ತೆರಳಿ ಪ್ರಾರ್ಥಿಸಿದ್ದಾರೆ.
ಶುಕ್ರವಾರ ಮೊಹಲಿಯಲ್ಲಿ ನಡೆದ ಸಭೆಯಲ್ಲಿ ಧುರಿ ಕ್ಷೇತ್ರದಿಂದ ಸುಮಾರು 58000 ಮತಗಳ ಅಂತರದಿಂದ ಗೆದ್ದಿರುವ ಭಗವಂತ್ ಮಾನ್ ಅವರನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಅವರು ಶನಿವಾರ ರಾಜಭವನದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು.
ಈ ಮಧ್ಯೆ ಮಾರ್ಚ್ 16 ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ವಗ್ರಾಮದಲ್ಲಿ ಮಾನ್ನ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಪಂಜಾಬ್ ಚುನಾವಣೆಯಲ್ಲಿ ಚೊಚ್ಚಲ ಬಾರಿಗೆ ಆಮ್ ಆದ್ಮಿ ಪಕ್ಷವು 117 ಸ್ಥಾನಗಳ ಪೈಕಿ 92 ಸ್ಥಾನಗಳೊಂದಿಗೆ ಭರ್ಜರಿಯಾಗಿ ಜಯ ಗಳಿಸಿದರೆ, ಕಾಂಗ್ರೆಸ್ 18, ಬಿಜೆಪಿ 2, ಶಿರೋಮಣಿ ಅಕಾಲಿದಳ 3 ಸ್ಥಾನಗಳನ್ನು ಪಡೆಯಲಷ್ಟೇ ಶಕ್ತವಾಗಿತ್ತು.