ಮಲ್ಲೇಶ್ವರಂನಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಪೂಜೆ ಮಾಡಿ, ಗುಂಡಿಯಲ್ಲಿ ಕುಳಿತು ವಿನೂತನ ಪ್ರತಿಭಟನೆ

Prasthutha|

- Advertisement -

ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಪೂಜೆ ಮಾಡಿ ,ಗುಂಡಿಯಲ್ಲಿ ಕುಳಿತು ಮಲ್ಲೇಶ್ವರಂ ನಿವಾಸಿಗಳು ವಿನೂತನ ಪ್ರತಿಭಟನೆ ನಡೆಸಿದ್ದಾರೆ.  

ಉನ್ನತ ಶಿಕ್ಷಣ ಸಚಿವ ಸಚಿವ ಅಶ್ವತ್ಥನಾರಾಯಣ್ ಕ್ಷೇತ್ರವಾದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆಯಲಾಗಿದೆ ಇದರಿಂದ ನಾಗರಿಕರ ಜೀವಕ್ಕೆ ಸಂಚಾಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಲ್ಲೇಶ್ವರಂ ನಿವಾಸಿಗಳು ಕ್ಲೌಡ್ ನೈನ್ ಆಸ್ಪತ್ರೆ ಬಳಿ ಗುಂಡಿ ಬಿದ್ದ ರಸ್ತೆಗಳಿಗೆ ಪೂಜೆ ಮಾಡಿ,ಗುಂಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಸಾಮಾಜಿಕ ಸೇವಾ ಕಾರ್ಯಕರ್ತ ಅನೂಪ್ ಆಯ್ಯಂಗಾರ್ ರವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ವಿಮಲ ವೆಂಕಟ್,ಸೋಮಶೇಖರ್ ,ಪೂರ್ಣಚಂದ್ರ ಚಂದ್ರು, ಹೆಚ್.ಸಿ.ಚಂದ್ರಶೇಖರ್,ಹೇಮಂತ್ ರವರು  ಭಾಗವಹಿಸಿದ್ದರು.

ನಂತರ ಮಾತನಾಡಿದ ಅನೂಪ್ ಆಯ್ಯಂಗಾರ್ ರವರು,  ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ರಸ್ತೆಗಳು ಗುಂಡಿಮಯವಾಗಿದೆ ಮತ್ತು ಕಳಪೆ ಕಾಮಗಾರಿಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿ ಸರ್ಕಲ್ ಮಾರಮ್ಮ ದೇವಸ್ಥಾನ ಬಳಿ ರಸ್ತೆ ಅಪಘಾತದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ. ಸ್ಯಾಂಕಿ ಕರೆಯಲ್ಲಿ 12ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ ಅದರು ಪೂರ್ಣಗೊಂಡಿಲ್ಲ. ಬೀಗಲ್ಸ್ ಬ್ಯಾಸ್ಕೆಟ್ ಬಾಲ್ ಒಳಾಂಗಣ ಕ್ರೀಡಾಂಗಣ ಸಾರ್ವಜನಿಕರಿಗೆ ಉಪಯೋಗಕ್ಕೆ ಅವಕಾಶ ನೀಡದೇ ಬೀಗ ಜಡಿಯಲಾಗಿದೆ. ಟೆಂಡರ್ ,ಮರು ಟೆಂಡರ್ ಗಳ ದೊಡ್ಡ ಹಗರಣ ಸರಮಾಲೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗಳು ನಡೆಯುತ್ತಿರುವ ಜಾಗದಲ್ಲಿ ಗುತ್ತಿದಾರರ ಹೆಸರು,ಇಂಜಿನಿಯರ್ ಗಳ ಬಗ್ಗೆ ಮಾಹಿತಿ ಹಾಗೂ ನಿಗದಿ ಮಾಡಿದ ಸಮಯ ,ಹಣದ ವೆಚ್ಚ ,ಕಾಲಮಿತಿ ವಿವರವುಳ್ಳ ಫಲಕಗಳು ಹಾಕಿಲ್ಲ. ಈ ನಡುವೆ ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಇದರಿಂದ ಮಕ್ಕಳು ,ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ನಡೆದಾಡಲು ಕಷ್ಟವಾಗಿದೆ ಮತ್ತು ವಾಹನ ಸಂಚಾರಕ್ಕೆ ಆನಾನುಕೂವಾಗಿದೆ. 145ವರ್ಷಗಳ ಇತಿಹಾಸವಿರುವ ಪಾರಂಪರಿಕ, ಸಾಂಸ್ಕೃತಿಕ ಪ್ರದೇಶ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ರಕ್ಷಣೆ ಮತ್ತು ಸುರಕ್ಷತೆಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Join Whatsapp