ಪುನೀತ್ ರಾಜ್ ಕುಮಾರ್ ನೇತ್ರದಾನದಿಂದ ಸ್ಫೂರ್ತಿ: 46 ಸಾವಿರ ಜನರ ನೇತ್ರದಾನ ನೋಂದಾಯಿತ ಗುರಿ

Prasthutha|

ಚಾಮರಾಜನಗರ : ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಚಾಮರಾಜನಗರ ತವರು ಜಿಲ್ಲೆಯ ಈ ಮಹಾನ್ ನಟರ ಆದರ್ಶವನ್ನು ಇನ್ನಷ್ಟು ಸಾರ್ಥಕತೆಗೊಳಿಸುವ ಸಲುವಾಗಿ ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಪುನೀತ್ ರಾಜ್ ಕುಮಾರ್ ಗೌರವಾರ್ಥ ಮಹತ್ವದ ನೇತ್ರದಾನ ಅಭಿಯಾನ ಆರಂಭಿಸಲಿದೆ.
ಪುನೀತ್ ರಾಜ್ ಕುಮಾರ್ ಅವರು 46ನೇ ವಯಸ್ಸಿನಲ್ಲಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 46 ಸಾವಿರ ಜನರನ್ನು ನೇತ್ರದಾನಕ್ಕಾಗಿ ನೋಂದಾಯಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ. ಜಿಲ್ಲೆಯಲ್ಲಿ ನಿರ್ಮಿಸಲಾಗುವ ಕಣ್ಣಿನ ಅಸ್ಪತ್ರೆಗೆ ಪುನೀತ್ ರಾಜ್ಕುಮಾರ್ ಗೌರವಾರ್ಥ ಅವರ ಹೆಸರನ್ನೆ ಇಡುವ ಮೂಲಕ ಗೌರವ ಸಲ್ಲಿಸುವ ಮಹತ್ವದ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಂಡಿದೆ.

- Advertisement -


ವಿಕಲಚೇತನರ ಇಲಾಖೆಯ ವರದಿಯನ್ವಯ ಜಿಲ್ಲೆಯಲ್ಲಿ 3500 ಅಂಧರಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ಮಂದಿ ಅಂಧರಿದ್ದಾರೆ ಎಂಬುದನ್ನು ಸರ್ವೇ ಕಾರ್ಯ ಆರಂಭಿಸುವ ಅಗತ್ಯವಿದೆ. ಇದಕ್ಕಾಗಿ ವ್ಯವಸ್ಥಿತವಾದ ಗುರಿ ನಿಗದಿಪಡಿಸಿಕೊಳ್ಳಬೇಕು. ಜಿಲ್ಲಾಡಳಿತ ಭವನದಲ್ಲಿಯೂ ಸಹ ಒಂದು ದಿನದ ಶಿಬಿರವನ್ನು ಆಯೋಜಿಸಲಾಗುವುದು. ನೇತ್ರದಾನ ಶಿಬಿರದಲ್ಲಿ ದೃಷ್ಠಿದಾನಕ್ಕಾಗಿ ನೊಂದಾಯಿತರಾದವರಿಗೆ ನೀಡಲು ಅರ್ಜಿ ನಮೂನೆ, ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ಸಿದ್ದಪಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ.


ಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆಯ ಅವಶ್ಯವಿದ್ದು, ಈಗಾಗಲೇ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಾಗ ಲಭ್ಯವಿಲ್ಲದಿದ್ದರೆ ಸರ್ಕಾರದಿಂದಲೇ ಸ್ಥಳ ನೀಡಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಿರುವ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನಿಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಕಣ್ಣಿನ ಆಸ್ಪತ್ರೆಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನೇ ಇಡುವ ಮೂಲಕ ಜಿಲ್ಲಾಡಳಿತ ಗೌರವ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.



Join Whatsapp