ನವದೆಹಲಿ : ಕಾಂಗ್ರೆಸ್ ಸರಕಾರ ಪತನಗೊಂಡಿರುವ ಹಿನ್ನೆಲೆಯಲ್ಲಿ, ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿದೆ.
ಪುದುಚೇರಿಯಲ್ಲಿ ಸಿಎಂ ವಿ. ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರಕಾರ ಪತನಗೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಾಗಲೇ, ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್ ಸರಕಾರ ಬಹುಮತ ಕಳೆದುಕೊಂಡಿದೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸರಕಾರ ರಚಿಸಲು ಮುಂದಾಗಿಲ್ಲ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ತರುವುದು ಸೂಕ್ತ ಎಂದು ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ್ದರು. ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಕೆಲವು ಶಾಸಕರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಪುದುಚೇರಿ ಮೂಲಕ, ತಮಿಳುನಾಡಿಗೆ ಪ್ರವೇಶ ಪಡೆಯುವುದು ಬಿಜೆಪಿಯ ಯೋಚನೆ ಎಂದು ಹೇಳಲಾಗುತ್ತಿದೆ.