ಮುಸ್ಲಿಮರಿಗೆ ಸಾರ್ವಜನಿಕವಾಗಿ ಲಾಠಿ ಪ್ರಹಾರ: ಪೊಲೀಸರಿಗೆ ಹೈಕೋರ್ಟ್ ನೋಟಿಸ್

Prasthutha|

ಅಹಮದಾಬಾದ್: ಇಸ್ಲಾಮೋಫೋಬಿಯಾದ ಮುಂದುವರಿದ ಭಾಗವಾಗಿ ಗುಜರಾತ್’ನ ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ಮುಸ್ಲಿಮ್ ಯುವಕರ ಮೇಲೆ ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಹಾಕಿ ಲಾಠಿಯಿಂದ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

- Advertisement -

ಅಕ್ಟೋಬರ್ 3ರಂದು ಉಂಧೇಲಾ ಗ್ರಾಮದಲ್ಲಿ ಮಸೀದಿಯ ಬಳಿ ಗಾರ್ಬಾ ಕಾರ್ಯಕ್ರಮವನ್ನು ಮುಸ್ಲಿಮರು ವಿರೋಧಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ನಡುವೆ ಗಲಾಟೆ ಉಂಟಾಗಿತ್ತು. ಇದನ್ನು ನೆಪವಾಗಿಟ್ಟು ಕ್ರೈಂ ಬ್ರಾಂಚ್’ನ ಪೊಲೀಸ್ ಅಧಿಕಾರಿಗಳು ಕೆಲವು ಮುಸ್ಲಿಮ್ ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಲಾಠಿಯಿಂದ ಹಲ್ಲೆ ನಡೆಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇನ್ಸ್’ಪೆಕ್ಟರ್ ಎ.ವಿ ಪರಮಾರ್ ಮತ್ತು ಸಬ್ ಇನ್ಸ್’ಪೆಕ್ಟರ್ ಡಿ.ಬಿ. ಕುಮಾವತ್ ಅವರು ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು. ಪೊಲೀಸ್ ಅಧಿಕಾರಿಗಳ ನಡೆಗೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಗೆ ಆದೇಶಿಸುವಂತೆ ಇಲಾಖೆಯನ್ನು ಆಗ್ರಹಿಸಿದ್ದರು.

ಘಟನೆಯ ಬಳಿಕ ಸಂತ್ರಸ್ತರಾದ ಝಹೀರ್ ಮಿಯಾ ಮಾಲೆಕ್, ಮಕ್ಸುದಾಬಾನು ಮಾಲೆಕ್, ಸಹದ್ ಮಿಯಾ ಮಾಲೆಕ್, ಸಕಿಲ್ ಮಿಯಾ ಮಾಲೆಕ್ ಮತ್ತು ಶಾಹಿದ್ ರಝಾ ಮಾಲೆಕ್ ಎಂಬವರು ಇನ್ಸ್’ಪೆಕ್ಟರ್ ಜನರಲ್ (IG), ಪೊಲೀಸ್ ವರಿಷ್ಠಾಧಿಕಾರಿ (SP), ಮಟರ್ ಪೊಲೀಸ್ ಠಾಣೆಯ 10 ಕಾನ್ಸ್’ಸ್ಟೇಬಲ್ ಮತ್ತು ಕ್ರೈಂ ವಿಭಾಗದ ಮೂವರು ಅಧಿಕಾರಿಗಳು ಒಳಗೊಂಡಂತೆ 15 ಪೊಲೀಸ್ ಸಿಬ್ಬಂದಿಗಳ ವಿರುದ್ಧ ಗುಜರಾತ್ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.

- Advertisement -

ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎ.ಜೆ. ಶಾಸ್ತ್ರಿ ಅವರನ್ನೊಳಗೊಂಡ ಪೀಠ 15 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್ 12 ರೊಳಗೆ ವಿಚಾರಣೆಗೆ ಬರುವಂತೆ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Join Whatsapp