ಬೆಂಗಳೂರು: ರಾಜ್ಯಾದ್ಯಂತ ಜೂನ್ 9 ರಿಂದ ಪಿಯುಸಿ ತರಗತಿಗಳು ಆರಂಭವಾಗಿದ್ದು, ಈ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ರಾಜ್ಯ ಶಿಕ್ಷಣ ಇಲಾಖೆ ಸಮವಸ್ತ್ರ ಧಾರಣೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ವಿದ್ಯಾರ್ಥಿನಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಆಗಮಿಸಲು ಅವಕಾಶ ಇರುವುದಿಲ್ಲ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಕಾಲೇಜಿನ ಅಭಿವೃದ್ಧಿ ಸಮಿತಿ ಸೂಚಿಸಿದ ಸಮವಸ್ತ್ರವನ್ನೇ ಧರಿಸಬೇಕು. ಕಾಲೇಜು ಅಭಿವೃದ್ಧಿ ಮಂಡಳಿ ಅಥವಾ ಆಡಳಿತ ವರ್ಗ ಸಮವಸ್ತ್ರ ಕಡ್ಡಾಯಗೊಳಿಸದಿದ್ದಲ್ಲಿ, ವಿದ್ಯಾರ್ಥಿಗಳು ಸಮಾನತೆ ಮತ್ತು ಏಕತೆ ಕಾಪಾಡುವಂತಹ ಉಡುಪು ಧರಿಸಬೇಕು. ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆಯಾಗುವಂತಹ ಬಟ್ಟೆ ಧರಿಸಲು ಅವಕಾಶವಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪಿಯು ಕಾಲೇಜು ಆಡಳಿತ ಮಂಡಳಿಗೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.
ಹಿಜಾಬ್ ವಿವಾದದ ಕುರಿತ ವಿಚಾರಣೆ ಸುಪ್ರಿಂ ಕೋರ್ಟ್ ನಲ್ಲಿ ಬಾಕಿಯಿದ್ದು, ಹೈಕೋರ್ಟ್ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರವು ಹಿಜಾಬ್ ಧರಿಸಲು ಅವಕಾಶ ನೀಡದೇ ಸಮವಸ್ತ್ರ ಕಡ್ಡಾಯಗೊಳಿಸಿ ಮಾರ್ಗಸೂಚಿ ರೂಪಿಸಿದೆ.ಇನ್ನು ಪಿಯು ಕಾಲೇಜುಗಳಿಗೆ ಶೈಕ್ಷಣಿಕ ವೇಳಾಪಟ್ಟಿಯನ್ನು ಕೂಡಾ ಸಾರ್ವಜನಿಕ ಶಿಕ್ಷಣ ಇಲಾಖೆ ನಿಗದಿಪಡಿಸಿದೆ.
2022 ಜೂನ್ 9 ರಿಂದ ಸೆಪ್ಟೆಂಬರ್ 30 ರವರೆಗೆ ಕಾಲೇಜು ಕಾರ್ಯನಿರ್ವಹಿಸಲಿದ್ದು, ಅಕ್ಟೋಬರ್ 1 ರಿಂದ 12 ರವರೆಗೆ ಮಧ್ಯಂತರ ರಜೆ ಘೋಷಿಸಲಾಗಿದೆ. ಅಕ್ಟೋಬರ್ 13 ರಿಂದ 2023 ಮಾರ್ಚ್ 31 ರವರೆಗೆ ಶೈಕ್ಷಣಿಕ ವರ್ಷದ ಎರಡನೇ ಅವಧಿ. ಏಪ್ರಿಲ್ ಒಂದರಿಂದ ಬೇಸಿಗೆ ರಜೆ ಎಂದು ಸದ್ಯ ನೀಡಿರುವ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.
ಕಾಲೇಜು ಅಭಿವೃದ್ಧಿ ಮಂಡಳಿಯ ನಿಯಮಾನುಸಾರ ಹಿಜಾಬ್ ಧಾರಣೆಗೆ ಅವಕಾಶಗಳಿದ್ದಲ್ಲಿ, ಶಿರವಸ್ತ್ರ ಧರಿಸಿ ಕಾಲೇಜುಗಳಿಗೆ ತೆರಳಬಹುದು ಎನ್ನಲಾಗಿದೆ.