ಪಿಎಸ್’ಐ ಹಗರಣ: ಮಧ್ಯವರ್ತಿಗಳಿಗೆ ಜಾಮೀನು

Prasthutha|

ಬೆಂಗಳೂರು: ಪಿಎಸ್’ಐ ಹಗರಣದಲ್ಲಿ ಬಂಧಿತರಾಗಿದ್ದ ಇಬ್ಬರು ಮಧ್ಯವರ್ತಿಗಳಿಗೆ ಭ್ರಷ್ಟಾಚಾರ ನಿರ್ಮೂಲನಾ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

- Advertisement -

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಿ. ಎನ್. ಶಶಿಧರ್ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ಲಗ್ಗೆರೆಯ ಡಿ.ಎಸ್. ಸಿದ್ದರಾಜು ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೆ. ಲಕ್ಷ್ಮಿನಾರಾಯಣ ಭಟ್ ಅವರ ನೇತೃತ್ವದ ಪೀಠವು ಮಾನ್ಯ ಮಾಡಿದೆ.

ಆರೋಪಿಗಳು ತಲಾ ಐದು ಲಕ್ಷ ವೈಯಕ್ತಿಕ ಬಾಂಡ್, ಒಬ್ಬರ ಭದ್ರತೆ ಜೊತೆಗೆ ತಲಾ 50 ಸಾವಿರ ರೂಪಾಯಿಗಳನ್ನು ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ಸಾಕ್ಷ್ಯಗಳಿಗೆ ಬೆದರಿಕೆ ಹಾಕುವಂತಿಲ್ಲ. ಪ್ರಕರಣದ ವಿಚಾರಣೆಯ ಎಲ್ಲಾ ದಿನ ನ್ಯಾಯಾಲಯದಲ್ಲಿ ಹಾಜರಿರಬೇಕು. ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇಲ್ಲವಾದಲ್ಲಿ ಈ ಕುರಿತು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಬೇಕು ಎಂಬ ಷರತ್ತುಗಳನ್ನು ಪೀಠವು ವಿಧಿಸಿದೆ.

- Advertisement -

ಪಿಎಸ್’ಐ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಹಾಗೂ ಆರನೇ ಆರೋಪಿಯ ಸಂಬಂಧಿಯಾದ ಶಶಿಧರ್ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಆರನೇ ಆರೋಪಿಯಿಂದ 50 ಲಕ್ಷ ರೂಪಾಯಿ ಸಂಗ್ರಹಿಸಿದ್ದ ಶಶಿಧರ್ ಅವರು ಚಂದ್ರಶೇಖರ್ ಎಂಬ ವ್ಯಕ್ತಿಯ ಮೂಲಕ 29ನೇ ಆರೋಪಿಗೆ ತಲುಪಿಸಿದ್ದರು ಎಂದು ಆರೋಪಿಸಲಾಗಿದೆ. ಶಶಿಧರ್ ಅವರು 2022ರ ಮೇ 9ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.

ಎರಡನೇ ಆರೋಪಿ ಗಜೇಂದ್ರ, ಏಳನೇ ಆರೋಪಿ ಮನೋಜ್ ಮತ್ತು 13ನೇ ಆರೋಪಿ ನಾಗೇಶ್ ಗೌಡ ಅವರು ತನಿಖೆಯ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಸಿದ್ದರಾಜು ಅವರು ಪಿಎಸ್ಐ ಕೆಲಸ ಮಾಡಲು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು, ಓಎಂಆರ್ ಶೀಟುಗಳನ್ನು ತಿದ್ದಲು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಜು ಅವರು 2022ರ ಸೆಪ್ಟೆಂಬರ್ 16ರಂದು ನ್ಯಾಯಾಲಯಕ್ಕೆ ಶರಣಾಗಿದ್ದರು.

Join Whatsapp