ಕಲ್ಬುರ್ಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬಂಧಿತ ಎಡಿಜಿಪಿಯಾಗಿದ್ದ ಅಮ್ರಿತ್ ಪೌಲ್ ಅವರನ್ನು ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದು, ಇದರಿಂದ ಯಾವೆಲ್ಲ ರಾಜಕಾರಣಿಗಳು ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣದಲ್ಲಿ ಅನೇಕ ಸಚಿವರು, ಅವರ ಆಪ್ತರು ಶಾಮೀಲಾಗಿರುವ ಬಗ್ಗೆ ಸಂಶಯವಿದೆ. ಈ ನಿಟ್ಟಿನಲ್ಲಿ ಸ್ಪಷ್ಟ ಮಾಹಿತಿ ಬಹಿರಂಗವಾಗಬೇಕಾದರೆ ಪ್ರಮುಖ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೊಳಪಡಿಸಬೇಕು. ಅಲ್ಲದೆ ಅಮ್ರಿತ್ ಪೌಲ್ ಬರೆದ ಡೈರಿ ಕುರಿತೂ ಕೂಲಂಕುಷ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ಈ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು ಎಂದು ಅವರು ಸೂಚಿಸಿದರು.